ಬೆಂಗಳೂರು: ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ 2020 -21ನೇ ಸಾಲಿನಿಂದ ಪರಿಚಯಿಸಲಾದ ಸಿ -20 ಪಠ್ಯಕ್ರಮದ ಬಗ್ಗೆ ಆಕ್ಷೇಪಣೆಗಳು ಬಂದಿದ್ದು, ವಿದ್ಯಾರ್ಥಿಗಳು, ಅಧ್ಯಾಪಕ ವರ್ಗದಿಂದ ಅಭಿಪ್ರಾಯ ಪಡೆದು ಪಠ್ಯ ಪರಿಷ್ಕರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.
ತಾಂತ್ರಿಕ ಶಿಕ್ಷಣ ಇಲಾಖೆ ವತಿಯಿಂದ ವಿಕಾಸಸೌಧದಲ್ಲಿ ಬುಧವಾರ ಏರ್ಪಡಿಸಿದ್ದ ತಾಂತ್ರಿಕ ಶಿಕ್ಷಣದಲ್ಲಿ ಉದ್ಯೋಗಾವಕಾಶ ವರ್ಧನೆ ಕುರಿತ ಕಾರ್ಯಾಗಾರದಲ್ಲಿ ವಿವಿಧ ಪಾಲಿಟೆಕ್ನಿಕ್ ಕಾಲೇಜುಗಳ ಆಧ್ಯಾಪಕರು, ಪ್ರಾಂಶುಪಾಲರು ಹೊಸ ಪಠ್ಯಕ್ರಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಡಿಪ್ಲೋಮಾ ವ್ಯಾಸಂಗದ ಬಳಿಕ ಉನ್ನತ ವ್ಯಾಸಂಗಕ್ಕೆ ಪೂರಕವಾಗಿಲ್ಲ. ಹೀಗಾಗಿ ಪಠ್ಯಕ್ರಮ ಪರಿಷ್ಕರಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ವಿಳಂಬವಾಗಿ ಆಗಮಿಸಿದ ಸಚಿವ ಎಂ.ಸಿ. ಸುಧಾಕರ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸಿ- 20 ಪಠ್ಯಕ್ರಮದ ಬಗೆಗಿನ ಆಕ್ಷೇಪದ ಬಗ್ಗೆ ಪ್ರತಿಕ್ರಿಯೆ ನೀಡಿ, ಹೊಸ ಪಠ್ಯ ಕ್ರಮದ ಬಗ್ಗೆ ನನಗೂ ದೂರುಗಳು ಬಂದಿವೆ. ರಾಜ್ಯದಲ್ಲಿ 102 ಸರ್ಕಾರಿ, 44 ಅನುದಾನಿತ, 196 ಖಾಸಗಿ ಪಾಲಿಟೆಕ್ನಿಕ್ ಕಾಲೇಜುಗಳಿದ್ದು, ಇವುಗಳಲ್ಲಿ ಜಾರಿಗೊಳಿಸಲಾದ ಹೊಸ ಪಠ್ಯ ಕ್ರಮದ ಬಗ್ಗೆ ಮಿಶ್ರ ಪ್ರತಿಕ್ರಿಯೆ ಬಂದಿದೆ. ವಿದ್ಯಾರ್ಥಿಗಳು, ಅಧ್ಯಾಪಕರೊಂದಿಗೆ ಮತ್ತಷ್ಟು ಅಭಿಪ್ರಾಯ ಪಡೆದು ಪಠ್ಯ ಪರಿಷ್ಕರಣೆ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ.