ಬೆಂಗಳೂರು: ಈ ವರ್ಷವೂ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪಠ್ಯ ಕಡಿತ ಮಾಡಲಾಗುವುದು. ಶೇಕಡ 20 ರಷ್ಟು ಪಠ್ಯ ಕಡಿತಗೊಳಿಸಲು ಶಿಕ್ಷಣ ಇಲಾಖೆ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ವರ್ಷವೂ ಶಾಲೆಗಳು ವಿಳಂಬವಾಗಿ ಆರಂಭವಾದ ಹಿನ್ನೆಲೆಯಲ್ಲಿ ಎಸ್ಎಸ್ಎಲ್ಸಿಯಲ್ಲಿ ಶೇಕಡ 20 ರಷ್ಟು ಪಠ್ಯ ಕಡಿತಗೊಳಿಸಲಾಗುತ್ತದೆ. ಪಿಯುಸಿಯಲ್ಲಿ ಪಠ್ಯ ಕಡಿತಗೊಳಿಸುವ ಚಿಂತನೆ ಇಲ್ಲ ಎನ್ನಲಾಗಿದೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕುರಿತಂತೆ ತೀರ್ಮಾನ ಕೈಗೊಳ್ಳಲಾಗಿದೆ. ಕಳೆದ ವರ್ಷ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಶೇಕಡ 30 ರಷ್ಟು ಪಠ್ಯ ಕಡಿತಗೊಳಿಸಲಾಗಿತ್ತು. ಈ ಬಾರಿ ಶೇಕಡ 20 ರಷ್ಟು ಪಠ್ಯ ಕಡಿತಗೊಳಿಸಲು ಶಿಕ್ಷಣ ಇಲಾಖೆ ಮುಂದಾಗಿದ್ದು, ಶೀಘ್ರವೇ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಹೇಳಲಾಗಿದೆ. ಬೋಧನೆಗೆ ಬಾಕಿ ಇರುವ ಪಠ್ಯಕ್ರಮದಲ್ಲಿ ನಿಗದಿತ ಪಠ್ಯಕ್ರಮವನ್ನು ಕಡಿತ ಮಾಡಲಾಗುವುದು ಎನ್ನಲಾಗಿದೆ.
ಪ್ರತಿವರ್ಷ 240ಕ್ಕೂ ಹೆಚ್ಚು ಶೈಕ್ಷಣಿಕ ದಿನಗಳು ಸಿಗುತ್ತಿದ್ದವು. ಆದರೆ, ಪ್ರಸಕ್ತ ವರ್ಷ ತಡವಾಗಿ ಶಾಲೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಈ ಶೈಕ್ಷಣಿಕ ಸಾಲಿನಲ್ಲಿ 140ಕ್ಕೂ ಕಡಿಮೆ ದಿನಗಳು ಇವೆ. ಇದರಿಂದ ಬೋಧನೆಗೆ ಶಿಕ್ಷಕರಿಗೆ ಒತ್ತಡವಾಗುತ್ತಿತ್ತು. ಒತ್ತಡದಲ್ಲೇ ಬೇಗನೆ ಪಠ್ಯ ಮುಗಿಸಲು ಶಿಕ್ಷಕರು ಮುಂದಾಗಿದ್ದು, ದಿನಕ್ಕೊಂದು ಪಾಠದಂತೆ ಬೋಧನೆ ಮಾಡುತ್ತಿದ್ದರು. ಒತ್ತಡದಿಂದಾಗಿ ವಿದ್ಯಾರ್ಥಿಗಳಿಗೂ ಕೂಡ ಪಾಠ ಅರ್ಥವಾಗುತ್ತಿರಲಿಲ್ಲ. ಪಠ್ಯ ಕಡಿತಗೊಳಿಸಬೇಕು ಎಂದು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ತೀವ್ರ ಒತ್ತಡ ಕೇಳಿಬಂದಿತ್ತು. ಹೀಗಾಗಿ ಪಠ್ಯ ಕಡಿತಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಚಿಂತನೆ ನಡೆಸಿದ್ದು, ಶಿಕ್ಷಣ ತಜ್ಞರು ಮತ್ತು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪಠ್ಯ ಕಡಿತದ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ.