ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದಲ್ಲಿನ ವಿವಾದಿತ ಪಠ್ಯ ಕೈ ಬಿಡಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದ್ದು, ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿದ ಬಳಿಕ ಆದೇಶ ಹೊರಡಿಸಲಾಗುವುದು.
2023 -24ನೇ ಶೈಕ್ಷಣಿಕ ಶಾಲೆಗೆ ಈಗಾಗಲೇ ಪಠ್ಯಪುಸ್ತಕಗಳು ಮುದ್ರಣವಾಗಿ ಮಕ್ಕಳಿಗೆ ವಿತರಿಸಲಾಗಿದೆ. ಪರಿಷ್ಕೃತ ಪಠ್ಯ ಮುದ್ರಿಸುವ ಬದಲಿಗೆ ವಿತರಿಸಲಾದ ಪಠ್ಯದಲ್ಲಿ ವಿವಾದಿತ ಹಾಗೂ ಆಕ್ಷೇಪಣೆ ಕೇಳಿ ಬಂದ ಪಾಠಗಳನ್ನು ಪಟ್ಟಿ ಮಾಡಿ ಕೈಬಿಡಲಾಗುವುದು.
ಆರ್.ಎಸ್.ಎಸ್. ಸಂಸ್ಥಾಪಕ ಹೆಡಗೇವಾರ್, ಚಿಂತಕ ಚಕ್ರವರ್ತಿ ಸೂಲಿಬೆಲೆ, ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅವರ ಪಠ್ಯಗಳು ಸೇರಿದಂತೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಪಠ್ಯಪುಸ್ತಕಗಳನ್ನು ಪರಿಷ್ಕರಿಸಿ ಆಕ್ಷೇಪಣೆ ಕೇಳಿ ಬಂದ ಪಠ್ಯ ಕೈಬಿಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ.
ವಿವಾದಿತ ಪಠ್ಯಗಳನ್ನು ಕೈಬಿಟ್ಟು ಅವುಗಳನ್ನು ಬೋಧನೆ ಮಾಡಿದಂತೆ ಶಾಲೆಗಳಿಗೆ ಸುತ್ತೋಲೆ ಹೊರಡಿಸಲು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಂಡು ಆದೇಶ ಹೊರಡಿಸಲಾಗುವುದು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ, 2017ನೇ ಸಾಲಿನ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಮುಖ್ಯಸ್ಥರಾಗಿದ್ದ ಸಾಹಿತಿ ಬರಗೂರು ರಾಮಚಂದ್ರಪ್ಪ, ಶಿಕ್ಷಣ ತಜ್ಞ ನಿರಂಜನಾರಾಧ್ಯ ಮೊದಲಾದ ಶಿಕ್ಷಣ ತಜ್ಞರು, ಸಾಹಿತಿಗಳು, ಅಧಿಕಾರಿಗಳ ಸಭೆ ನಡೆಸಿದ್ದು, ಸಭೆಯಲ್ಲಿ ಈ ಕುರಿತಾಗಿ ತೀರ್ಮಾನ ಕೈಗೊಳ್ಳಲಾಗಿದೆ.