ಬೆಂಗಳೂರು: 9ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಜಗಜ್ಯೋತಿ ಬಸವಣ್ಣನವರ ಬಗ್ಗೆ ಅನೇಕ ತಪ್ಪು ಮಾಹಿತಿಗಳಿದ್ದು, ಇದನ್ನು ಕೂಡಲೇ ಸರಿಪಡಿಸಬೇಕು. ಇಲ್ಲದಿದ್ದಲ್ಲಿ ಕಾನೂನು ಹೋರಾಟ ಕೈಗೊಳ್ಳುವುದಾಗಿ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ವಿಭೂತಿಪುರ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಈ ಕುರಿತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ. 2016 ರಿಂದ 24ರ ವರೆಗೆ ಬಸವಣ್ಣನವರ ಪರಿಚಯವನ್ನು ಮೂರು ಬಾರಿ ಪರಿಷ್ಕರಣೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಬಸವಣ್ಣನವರ ಬಗ್ಗೆ ತಪ್ಪು ಮಾಹಿತಿ ನೀಡುವುದು ಸರಿಯಲ್ಲ, ಪಠ್ಯಪುಸ್ತಕ ಪರಿಷ್ಕರಣ ಸಮಿತಿಗೆ ತಪ್ಪು ಸರಿಪಡಿಸಲು ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ.
ಪರಿಷ್ಕೃತಗೊಂಡ ಪಠ್ಯದಲ್ಲಿ ವೀರಶೈವ ಪದ ತೆಗೆದು ಹಾಕಲಾಗಿದೆ. ಬಸವಣ್ಣನವರು ತಮ್ಮ ಒಂದು ವಚನದಲ್ಲಿಯೂ ಲಿಂಗಾಯತ ಪದ ಬಳಸಿಲ್ಲ. ಆದರೆ, ಪಠ್ಯದಲ್ಲಿ ಲಿಂಗಾಯತ ಪದ ಬಳಸಿರುವುದು ಇತಿಹಾಸವನ್ನು ತಿರುಚಿದಂತಾಗುತ್ತದೆ. ಬಸವಣ್ಣನವರು ಅರಿವನ್ನೇ ಗುರುವಾಗಿಸಿಕೊಂಡಿದ್ದರು. ಇಷ್ಟಲಿಂಗದ ವಿನೂತನ ಪರಿಕಲ್ಪನೆ ಜಾರಿಗೆ ತಂದರು ಎಂದು ಪ್ರಕಟಿಸಿದ್ದು, ಇದು ಸಹ ತಪ್ಪು ಮಾಹಿತಿಯಾಗಿದೆ ಎಂದು ಹೇಳಲಾಗಿದೆ.