ಅಮೆರಿಕದ ಟೆಕ್ಸಾಸ್ ನಲ್ಲಿ 50 ವರ್ಷದ ವ್ಯಕ್ತಿ ಒಮಿಕ್ರಾನ್ ನಿಂದ ಮೃತಪಟ್ಟಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೊರೋನಾವೈರಸ್ ರೂಪಾಂತರ ಒಮಿಕ್ರಾನ್ ಸೋಂಕಿನಿಂದ ಅಮೆರಿಕದಲ್ಲಿ ಮೊದಲ ಬಲಿಯಾಗಿದೆ. ಲಸಿಕೆ ಹಾಕಿಸಿಕೊಳ್ಳದ ವ್ಯಕ್ತಿ ಒಮಿಕ್ರಾನ್ ನಿಂದ ಮೃತಪಟ್ಟಿದ್ದಾನೆ. ಆತ ಹಿಂದೆ ಕೋವಿಡ್ ಸೋಂಕಿಗೆ ಒಳಗಾಗಿದ್ದ ಎಂದು ಹ್ಯಾರಿಸ್ ಕೌಂಟಿ ಸಾರ್ವಜನಿಕ ಆರೋಗ್ಯ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ರಾಷ್ಟ್ರವ್ಯಾಪಿ ಶೇ. 73 ರಷ್ಟು ಒಮಿಕ್ರಾನ್ ಪ್ರಕರಣಗಳಿವೆ ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಘೋಷಿಸಿದ ಕೂಡಲೇ, ದೇಶವು ಒಮಿಕ್ರಾನ್ ನಿಂದ ತನ್ನ ಮೊದಲ ಸಾವನ್ನು ದಾಖಲಿಸಿದೆ.
ಕೊರೋನಾಗೆ ಕಾರಣವಾಗುವ ವೈರಸ್ ನ ಇತರೆ ತಳಿಗಳಿಗಿಂತ ಒಮಿಕ್ರಾನ್ ಅಪಾಯಕಾರಿಯಲ್ಲ ಎಂದು ಹೇಳಲಾಗಿದ್ದರೂ, ಲಸಿಕೆ ಹಾಕಿಸಿಕೊಳ್ಳದವರಿಗೆ ಇದು ಅಪಾಯವನ್ನು ಉಂಟು ಮಾಡುತ್ತದೆ ಎಂದು ಯುಎಸ್ ಸರ್ಜನ್ ಜನರಲ್ ಡಾ. ವಿವೇಕ್ ಮೂರ್ತಿ ಎಚ್ಚರಿಸಿದ್ದಾರೆ.
ಲಸಿಕೆಯನ್ನು ಪಡೆಯುವುದು ಮಾತ್ರವಲ್ಲದೆ, ಅರ್ಹರಾಗಿರುವ ಪ್ರತಿಯೊಬ್ಬರು ಮೂರನೇ ಬೂಸ್ಟರ್ ಶಾಟ್ ಅನ್ನು ಪಡೆಯಲು ಸಲಹೆ ನೀಡಿದ್ದಾರೆ.
ಅಮೆರಿಕದಲ್ಲಿ ಒಮಿಕ್ರಾನ್ ಕೇಸ್ ಹೆಚ್ಚಳವಾಗುತ್ತಿರುವ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ನಾವು ಮತ್ತೊಮ್ಮೆ ಹೋರಾಡಬೇಕಿದೆ. ಮುಂಚೂಣಿ ಕಾರ್ಯಕರ್ತರಿಗೆ ಶಕ್ತಿಯನ್ನು ತುಂಬಬೇಕಿದೆ. ಎರಡು ವರ್ಷಗಳಿಂದ ಮಾಡುತ್ತಿರುವ ತ್ಯಾಗಕ್ಕೆ ಧನ್ಯವಾದಗಳು. ಎಲ್ಲರೂ ಬೂಸ್ಟರ್ ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕು, ಮಾಸ್ಕ್ ಧರಿಸಬೇಕು. ಒಟ್ಟಾಗಿ ಪರಿಸ್ಥಿತಿ ಎದುರಿಸಬೇಕು ಎಂದು ಮನವಿ ಮಾಡಿದ್ದಾರೆ.
ಇನ್ನು ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ ಲಸಿಕೆ ಪಡೆಯದವರಿಗೆ ಒಮಿಕ್ರಾನ್ ಸೋಂಕು ತಗುಲಿದೆ. ಐಸಿಯುನಲ್ಲಿರುವ 10 ಸೋಂಕಿತರ ಪೈಕಿ 9 ಜನ ಲಸಿಕೆ ಪಡೆದುಕೊಂಡಿಲ್ಲ ಎಂದು ಡಾ. ಏಂಜೆಲಿಕ್ ಕೊಟ್ಜಿ ಮಾಹಿತಿ ನೀಡಿದ್ದಾರೆ. ಕೊಟ್ಜಿ ಅವರು ಒಮಿಕ್ರಾನ್ ವೈರಸ್ ಮೊದಲು ಪತ್ತೆಹಚ್ಚಿದ ವೈದ್ಯರಾಗಿದ್ದಾರೆ.