ಬೆಂಗಳೂರು: ಶಿಕ್ಷಕರ ಅರ್ಹತಾ ಪರೀಕ್ಷೆಯ ಹಾಲ್ ಟಿಕೆಟ್ ನಲ್ಲಿ ಅಶ್ಲೀಲ ಫೋಟೋ ಮುದ್ರಣವಾಗಿರುವುದು ತಡವಾಗಿ ಬಳಕೆಗೆ ಬಂದಿದೆ. ಪ್ರವೇಶ ಪತ್ರದಲ್ಲಿ ಅಶ್ಲೀಲ ಚಿತ್ರ ಬಂದಿರುವುದಕ್ಕೆ ಇಲಾಖೆ ಹೊಣೆಯಲ್ಲ, ಇಲಾಖೆಯಿಂದ ಯಾವುದೇ ಲೋಪವಾಗಿಲ್ಲ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.
ಭಾನುವಾರ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆದಿದ್ದು, ಚಿಕ್ಕಮಗಳೂರು ಜಿಲ್ಲೆಯ ಅಭ್ಯರ್ಥಿಯೊಬ್ಬರ ಪ್ರವೇಶ ಪತ್ರದಲ್ಲಿ ಅಶ್ಲೀಲ ಫೋಟೋ ಮುದ್ರಣವಾಗಿ ಎಡವಟ್ಟು ನಡೆದಿದೆ. ಇದು ಆನ್ಲೈನ್ ದೋಷವೆಂದು ಪರಿಗಣಿಸಿ ಅಭ್ಯರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.
ಶಿಕ್ಷಣ ಇಲಾಖೆಯಿಂದ ಈ ಲೋಪವಾಗಿಲ್ಲ. ಆದರೂ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಪರೀಕ್ಷೆ ನಡೆಸಿದ ಶಿಕ್ಷಣ ಇಲಾಖೆಯ ಕೇಂದ್ರೀಯ ದಾಖಲಾತಿ ಘಟಕ ಕೋರಿದೆ.
ಚಿಕ್ಕಮಗಳೂರು ಜಿಲ್ಲೆಯ ಖಾಸಗಿ ಶಾಲಾ ಶಿಕ್ಷಕಿಯೊಬ್ಬರು ವೆಬ್ಸೈಟ್ ನಿಂದ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಂಡಾಗ ಅಭ್ಯರ್ಥಿಯ ಫೋಟೋ ಜಾಗದಲ್ಲಿ ಅಶ್ಲೀಲ ಚಿತ್ರ ಮುದ್ರಣವಾಗಿರುವುದು ಕಂಡುಬಂದಿದ್ದು, ಆನ್ಲೈನ್ ದೋಷವೆಂದು ಪರಿಗಣಿಸಿ ಪರೀಕ್ಷೆಗೆ ಅವಕಾಶ ನೀಡಲಾಗಿದೆ.
ಪರೀಕ್ಷೆಗೆ ಆನ್ ಲೈನ್ ಅರ್ಜಿ ಸಲ್ಲಿಸುವ ಮೊದಲು ತಾವೇ ತಮ್ಮ ಯೂಸರ್ ಐಡಿ, ಪಾಸ್ವರ್ಡ್ ಸೃಷ್ಟಿಸಿ ನೋಂದಣಿ ಮಾಡಿಕೊಳ್ಳುತ್ತಾರೆ. ಅದು ಸಂಪೂರ್ಣ ಗೌಪ್ಯ ಹಾಗೂ ಅಭ್ಯರ್ಥಿಯ ಖಾಸಗಿ ಮಾಹಿತಿಯಾಗಿದ್ದು, ಅಭ್ಯರ್ಥಿ ತನ್ನ ಎಲ್ಲಾ ಮಾಹಿತಿ ಭರ್ತಿ ಮಾಡಿ ಫೋಟೋ ಮತ್ತು ಸಹಿ ಸ್ಕ್ಯಾನ್ ಮಾಡಿ ನಿಗದಿತ ಅಂಕಣದಲ್ಲಿ ಅಪ್ಲೋಡ್ ಮಾಡಿದ ನಂತರ ತಾನು ಅಪ್ಲೋಡ್ ಮಾಡಿದ ಮಾಹಿತಿ ಸರಿಯಾಗಿದೆ ಎಂದು ದೃಢೀಕರಿಸಿರುತ್ತಾರೆ. ಶಿಕ್ಷಣ ಇಲಾಖೆಯಿಂದ ಫೋಟೋ ಅಪ್ಲೋಡ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.