ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಸೆಪ್ಟೆಂಬರ್, 03 ರಂದು ನಡೆಯುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗಳನ್ನು ಯಾವುದೇ ಅವ್ಯವಹಾರಗಳಿಲ್ಲದಂತೆ ಸುಗಮವಾಗಿ ನಡೆಸುವ ಸಲುವಾಗಿ ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144 ರಡಿ ದತ್ತವಾದ ಅಧಿಕಾರದಂತೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ), ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು(ಬ್ಲಾಕ್-01), ಸರ್ಕಾರಿ ಪದವಿ ಪೂರ್ವ ಕಾಲೇಜು(ಬ್ಲಾಕ್-02) ಮತ್ತು ನಗರದ ಸಂತ ಮೈಕಲರ ಪ್ರೌಢಶಾಲೆ ಈ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ನಿರ್ಬಂಧಿತ ಸ್ಥಳ ಎಂದು ಘೋಷಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಅವರು ಆದೇಶಿಸಿದ್ದಾರೆ.
ನಿಷೇಧಿತ ವಲಯದಲ್ಲಿ ಯಾವುದೇ ರೀತಿಯಲ್ಲಿ ಪರೀಕ್ಷೆಯಲ್ಲಿ ನಕಲು ಹೊಡೆಯಲು ಸಹಾಯ ಮಾಡುವುದು, ಚೀಟಿ ಅಥವಾ ಇನ್ನಿತರ ರೀತಿಯಲ್ಲಿ ಉತ್ತರಗಳನ್ನು ಬರೆದು ಹಂಚುವುದು, ಇನ್ನಾವುದೇ ವಸ್ತುಗಳನ್ನು ಹಂಚುವುದು/ ರವಾನಿಸುವುದು ಮತ್ತಿತರ ಚಟುವಟಿಕೆ ಸಂಪೂರ್ಣ ನಿಷೇಧಿಸಿದೆ.
ಪರೀಕ್ಷಾ ಕೇಂದ್ರದೊಳಗೆ ಮೊಬೈಲ್, ಸ್ಮಾರ್ಟ್ ವಾಚ್ ಮುಂತಾದ ಎಲೆಕ್ಟ್ರಾನಿಕ್ ಸಾಮಾಗ್ರಿಗಳನ್ನು ಒಯ್ಯುವುದು ಮತ್ತು ಬಳಸುವುದನ್ನು ನಿಷೇಧಿಸಿದೆ. ಪರೀಕ್ಷಾ ಕೇಂದ್ರದೊಳಗೆ ಅನಧಿಕೃತ ವ್ಯಕ್ತಿಗಳ ಪ್ರವೇಶ, ಚಿತ್ರೀಕರಣ ಮುಂತಾದವುಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಯಾವುದೇ ನಿಯಮಬಾಹಿರ ಕಾರ್ಯಗಳನ್ನು ನಡೆಸತಕ್ಕದ್ದಲ್ಲ. ನಿಷೇಧಿತ ವಲಯದಲ್ಲಿ ಯಾವುದೇ ರೀತಿಯ ಸ್ಫೋಟಕ ವಸ್ತುಗಳನ್ನು ಕೊಂಡು ಹೋಗುವುದನ್ನು ಹಾಗೂ ಇನ್ನಿತರ ಮಾರಕ ಆಯುಧಗಳನ್ನು ಹೊಂದುವುದನ್ನು ನಿಷೇಧಿಸಲಾಗಿದೆ.ನಿಷೇಧಿತ ವಲಯದಲ್ಲಿ ಪರೀಕ್ಷೆಗೆ ಸಂಬಂಧಿಸಿದ ಯಾವುದೇ ವಿಷಯಗಳನ್ನು/ ಮಾಹಿತಿಯನ್ನು ರವಾನಿಸುವ, ತಿಳಿಸುವ ಸಲುವಾಗಿ ಸಂಜ್ಞೆಗಳನ್ನು ಮಾಡುವುದು ಮುಂತಾದ ಕ್ರಿಯೆಗಳಲ್ಲಿ ತೊಡಗುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಪರೀಕ್ಷೆ ಪ್ರಾರಂಭವಾಗುವ ಒಂದು ಗಂಟೆ ಮುಂಚಿತವಾಗಿ ಹಾಗೂ ಪರೀಕ್ಷೆ ಮುಗಿಯುವವರೆಗೆ ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿರುವ ಕಂಪ್ಯೂಟರ್ ಮತ್ತು ಜೆರಾಕ್ಸ್ ಅಂಗಡಿಗಳು ಕಾರ್ಯ ನಿರ್ವಹಿಸುವುದನ್ನು ಮತ್ತು ಈ ವ್ಯಾಪ್ತಿಯಲ್ಲಿ ಧ್ವನಿವರ್ಧಕ ಬಳಕೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.