
ಶಿವಮೊಗ್ಗ: 2022 ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯು ನ.6 ರ ಭಾನುವಾರ ನಗರದ 22 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಗೆ ಅಗತ್ಯವಾದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದರು.
ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಸಂಬಂಧ ನಿಯೋಜಿತ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಲು ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನ.6 ರಂದು ನಗರದ 22 ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ 9.30 ರಿಂದ 12 ಗಂಟೆವರೆಗೆ ಪೇಪರ್-1 ಮತ್ತು ಮಧ್ಯಾಹ್ನ 1.30 ರಿಂದ ಸಂಜೆ 4.30 ರವರೆಗೆ ಪೇಪರ್-2 ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷಾ ಕೇಂದ್ರದ ಆವರಣದೊಳಗೆ ಅಭ್ಯರ್ಥಿಗಳ ಪ್ರವೇಶ, ಬೆಲ್ ಆಗುವ ಸಮಯ, ನಿಗದಿತ ವೇಳಾಪಟ್ಟಿಯಂತೆ ಮತ್ತು ಮಾರ್ಗಸೂಚಿಯನ್ವಯ ಪರೀಕ್ಷೆಯನ್ನು ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಇದೆಯಾ ಎಂದು ಖಾತ್ರಿ ಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಸಿಸಿ ಟಿವಿ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕು. ಒಂದು ಶಾಲೆಯ ಅಧಿಕಾರಿಗಳನ್ನು ಅದೇ ಶಾಲೆಗೆ ನಿಯೋಜಿಸದೆ, ಬೇರೆ ಶಾಲೆಗಳಿಗೆ ಮೇಲ್ವಿಚಾರಕರು, ಕೇಂದ್ರ ಅಧೀಕ್ಷಕರು, ಸಿಟ್ಟಿಂಗ್ ಸ್ಕ್ಯಾಡ್ ಆಗಿ ನೇಮಿಸಬೇಕು.
ಯಾವುದೇ ರೀತಿಯ ಮೊಬೈಲ್, ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ವಾಚ್ ಗಳನ್ನು ಪ್ರವೇಶ ಕೇಂದ್ರಗಳೊಳಗೆ ನಿರ್ಬಂಧಿಸಬೇಕು. ಸೂಕ್ತವಾದ ಆಸನ ವ್ಯವಸ್ಥೆ, ವಿಕಲಚೇತನರಿಗೆ ನೆಲಮಹಡಿಯಲ್ಲಿ ವ್ಯವಸ್ಥೆ ಮಾಡಬೇಕು. ಪರೀಕ್ಷೆಗೆ ಪೂರ್ವಭಾವಿಯಾಗಿ ಕೇಂದ್ರಗಳಿಗೆ ಸಂಬಂಧಿಸಿದ ಅಧಿಕಾರಿಗಳು ತೆರಳಿ, ಆಸನ ವ್ಯವಸ್ಥೆ, ಸಿಸಿ ಟಿವಿ ಸೇರಿದಂತೆ ಎಲ್ಲ ರೀತಿಯ ಸಿದ್ದತೆಗಳನ್ನು ಖಾತ್ರಿಪಡಿಸಿಕೊಳ್ಳಬೇಕು.
ಪರೀಕ್ಷೆಯನ್ನು ಶಾಂತಿಯುತವಾಗಿ ನಡೆಸಲು ಹಾಗೂ ಮುಂಜಾಗ್ರತಾ ಕ್ರಮವಾಗಿ ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಇಬ್ಬರಂತೆ ಪೊಲೀಸ್ ಸಿಬ್ಬಂದಿಗಳ ಹಾಗೂ ಜಿಲ್ಲಾ ಖಜಾನೆಯಿಂದ ಪ್ರಶ್ನೆಪತ್ರಿಕೆಗಳನ್ನು ಮಾರ್ಗಾಧಿಕಾರಿಗಳು ಪಡೆದು ಸಂಬಂಧಪಟ್ಟ ಪರೀಕ್ಷಾ ಕೇಂದ್ರಗಳಿಗೆ ಸರಬರಾಜು ಮಾಡಲು ಪ್ರತಿ ಮಾರ್ಗಕ್ಕೆ ಒಬ್ಬರಂತೆ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಬೇಕೆಂದು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ:
ಪರೀಕ್ಷೆಯಲ್ಲಿ ಯಾವುದೇ ಅವ್ಯವಹಾರಗಳಿಗೆ, ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಸಲುವಾಗಿ ಸಿಆರ್‍ಪಿಸಿ ಕಲಂ 144 ರನ್ವಯ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀ.ಫಾಸಲೆವರೆಗೆ ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿದೆ.
ಪರೀಕ್ಷಾರ್ಥಿಗಳು ಹಾಗೂ ಪರೀಕ್ಷೆಗೆ ಸಂಬಂಧಪಟ್ಟ ಸಿಬ್ಬಂದಿ/ಅಧಿಕಾರಿಗಳನ್ನು ಹೊರತುಪಡಿಸಿ ಇತರೆ ವ್ಯಕ್ತಿಗಳು ಪರೀಕ್ಷಾ ಕೇಂದ್ರ ಫಾಸೆ ಪ್ರವೇಶಿಸುವುದನ್ನು ನಿಷೇಧಿಸಿದೆ. ನಿಷೇಧಿತ ವ್ಯಾಪ್ತಿಯಲ್ಲಿ ಐದಕ್ಕಿಂತ ಹೆಚ್ಚು ಜನರು ಸೇರುವುದು, ಕೇಂದ್ರದ ಸುತ್ತಮುತ್ತಲಿರುವ ಟೈಪಿಂಗ್, ಜೆರಾಕ್ಸ್ ಹಾಗೂ ಫ್ಯಾಕ್ಸ್ ಅಂಗಡಿಗಳು ಈ ಅವಧಿಯಲ್ಲಿ ತೆರೆಯುವುದನ್ನು ಹಾಗೂ ಮೊಬೈಲ್ ಬಳಕೆಯನ್ನು ಪ್ರತಿಬಂಧಿಸಲಾಗಿದೆ ಎಂದರು.
ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ ಮಾತನಾಡಿ, ಪರೀಕ್ಷೆಗೆ ಸಂಬಂಧಿಸಿದಂತೆ ಮೇಲ್ವಿಚಾರಕರು, ಕೇಂದ್ರ ಅಧೀಕ್ಷಕರು, ಸಿಟ್ಟಿಂಗ್ ಸ್ಕ್ಯಾಡ್, ಮಾರ್ಗಾಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿ/ಸಿಬ್ಬಂದಿಗಳು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ವಿವರಿಸಿ ಹೇಳಿದರು.
ಸಭೆಯಲ್ಲಿ ಡಯಟ್ ಪ್ರಾಂಶುಪಾಲ ಬಸವರಾಜಪ್ಪ, ಬಿಇಓ ನಾಗರಾಜ್, ಜಿಲ್ಲಾ ಖಜಾನಾಧಿಕಾರಿ ಎಸ್.ಹೆಚ್. ಸಾವಿತ್ರಿ, ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳ ಪ್ರಾಂಶುಪಾಲರು, ಉಪ ಪ್ರಾಚಾರ್ಯರು, ಸಿಬ್ಬಂದಿ ಹಾಜರಿದ್ದರು.