ಬೆಂಗಳೂರು: ಕೋವಿಡ್ ಟೆಸ್ಟ್ ಮಾಡಿಸಲು ಒಪ್ಪದ ವ್ಯಕ್ತಿ ಮೇಲೆ ಬಿಬಿಎಂಪಿ ಅಧಿಕಾರಿ, ಸಿಬ್ಬಂದಿ ಹಲ್ಲೆ ಮಾಡಿದ ಘಟನೆ ನಾಗರತ್ ಪೇಟೆಯಲ್ಲಿ ನಡೆದಿದೆ ಎನ್ನಲಾಗಿದೆ.
ನಾಗರತ್ ಪೇಟೆಯಲ್ಲಿ ಕೋವಿಡ್ ಟೆಸ್ಟ್ ಮಾಡಲಾಗುತ್ತಿದ್ದು, ವ್ಯಾಕ್ಸಿನೇಷನ್ ನೀಡಲಾಗುತ್ತಿದೆ ಎಂದು ತಪ್ಪಾಗಿ ತಿಳಿದ ಕಿಶನ್ ಎಂಬುವವರು ನೋಂದಣಿ ಮಾಡಿಸಿದ್ದಾರೆ. ಅವರು ಲಸಿಕೆ ಪಡೆಯಲು ಬಂದಾಗ ಅದು ಕೋವಿಡ್ ಟೆಸ್ಟ್ ಗಾಗಿ ನೋಂದಣಿ ಎನ್ನುವುದು ಗೊತ್ತಾಗಿದೆ.
ಒಟಿಪಿ ಬಂದಿರುವುದು ಲಸಿಕೆಗೆ ಅಲ್ಲ, ಅದು ಟೆಸ್ಟ್ ಗಾಗಿ ಬಂದ ನೋಂದಣಿ ಎನ್ನುವುದು ತಿಳಿದು ಅವರು ಟೆಸ್ಟ್ ಮಾಡಿಸಲು ನಿರಾಕರಿಸಿದ್ದಾರೆ. ಆಗ ಕಿಶನ್ ಮೇಲೆ ಬಿಬಿಎಂಪಿ ಅಧಿಕಾರಿಗಳು, ಸಿಬ್ಬಂದಿ ಹಲ್ಲೆ ಮಾಡಿದ್ದಾರೆ. ಬಲವಂತವಾಗಿ ಟೆಸ್ಟ್ ಮಾಡಿಸಿಕೊಳ್ಳಬೇಕೆಂದು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಈ ಘಟನೆಯ ವಿವರ ಪಡೆದ ಹಲಸೂರ್ ಗೇಟ್ ಠಾಣೆ ಪೊಲೀಸರು ತಪ್ಪಿತಸ್ಥ ಬಿಬಿಎಂಪಿ ಅಧಿಕಾರಿ, ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೆಕ್ಷನ್ 341, 323 ಮತ್ತು 504 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎನ್ನಲಾಗಿದೆ. ಬೆಂಗಳೂರಿನ ನಾಗರತ್ ಪೇಟೆಯ ಯುವಕನನ್ನು ಥಳಿಸಿ ಬಿಬಿಎಂಪಿ ಸಿಬ್ಬಂದಿ ಗುಂಡಾಗಿರಿ ಮಾಡಿದ್ದಾರೆ ಎನ್ನಲಾದ ಘಟನೆ ಬಗ್ಗೆ ಬಿಬಿಎಂಪಿ ಆಯುಕ್ತರು ವಿಷಾದ ವ್ಯಕ್ತಪಡಿಸಿದ್ದಾರೆ.