ಮಧುರೈ: ಪ್ರಾದೇಶಿಕ ಭಾಷೆಗಳನ್ನು ಕಡೆಗಣಿಸಿದ ಹಿನ್ನೆಲೆಯಲ್ಲಿ ಕೇಂದ್ರದ ಪರೀಕ್ಷೆಯನ್ನೇ ಮದ್ರಾಸ್ ಹೈಕೋರ್ಟ್ ರದ್ದುಪಡಿಸಿದೆ.
ಕೇಂದ್ರ ಸರ್ಕಾರದಿಂದ ನಡೆಸಲಾಗುವ ಕಿಶೋರ್ ವೈಜ್ಞಾನಿಕ್ ಪ್ರೋತ್ಸಾಹನ್ ಯೋಜನೆ(KVPY) ಪರೀಕ್ಷೆಯಲ್ಲಿ ಪ್ರಾದೇಶಿಕ ಭಾಷೆಗಳನ್ನು ಕಡೆಗಣಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಬಿಸಿ ಮುಟ್ಟಿಸಿದ್ದು, ನವೆಂಬರ್ 7 ರಂದು ನಿಗದಿಪಡಿಸಲಾಗಿದ್ದ ಪರೀಕ್ಷೆಯನ್ನು ರದ್ದುಗೊಳಿಸಿದೆ.
ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಪರೀಕ್ಷೆ ನಡೆಸಲು ಮುಂದಾಗಿರುವ ಕೇಂದ್ರದ ಕ್ರಮದ ಬಗ್ಗೆ ಮದ್ರಾಸ್ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ್ದು, ಪರೀಕ್ಷೆ ರದ್ದು ಮಾಡಿ ಬಹುಭಾಷೆಗಳಲ್ಲಿ ಪರೀಕ್ಷೆ ನಡೆಸಲು ತೆಗೆದುಕೊಂಡ ಕ್ರಮಗಳ ಕುರಿತಾಗಿ ಉತ್ತರ ನೀಡಬೇಕೆಂದು ನೋಟಿಸ್ ಜಾರಿ ಮಾಡಲಾಗಿದೆ.
ಮದ್ರಾಸ್ ಹೈಕೋರ್ಟ್ ನ ಮಧುರೈ ಪೀಠದಲ್ಲಿ ಕೇಂದ್ರ ಸರ್ಕಾರ ನಡೆಸುವ ಕಿಶೋರ್ ವೈಜ್ಞಾನಿಕ್ ಪ್ರೋತ್ಸಾಹನ್ ಯೋಜನೆಯ ಪರೀಕ್ಷೆಯಲ್ಲಿ ತಮಿಳು ಸೇರಿದಂತೆ ಪ್ರಾದೇಶಿಕ ಭಾಷೆ ಆಯ್ಕೆಗೆ ಅವಕಾಶ ಇಲ್ಲದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಪಿಐಎಲ್ ಸಲ್ಲಿಕೆಯಾಗಿದೆ. ಈ ಅರ್ಜಿ ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಇಂಗ್ಲಿಷ್, ಹಿಂದಿ ಭಾಷೆ ಪದ್ಧತಿಯನ್ನು ಸಮರ್ಥಿಸಿಕೊಂಡಿದೆ. ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ನಡೆಸುವ ಬಗ್ಗೆ ಹಲವು ಅಡಚಣೆಗಳ ನೆಪವೊಡ್ಡಿದ್ದು, ಮುಖ್ಯನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಎಂ. ದೊರೆಸ್ವಾಮಿ ನೇತೃತ್ವದ ಪೀಠ ಕೇಂದ್ರದ ಸಮರ್ಥನೆಯನ್ನು ಪುರಸ್ಕರಿಸಿಲ್ಲ. ಪ್ರಕರಣದ ಮುಂದಿನ ವಿಚಾರಣೆಯನ್ನು ಚೆನ್ನೈ ಮುಖ್ಯ ಪೀಠಕ್ಕೆ ವರ್ಗಾವಣೆ ಮಾಡಲಾಗಿದ್ದು, ಕೇವಲ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಪರೀಕ್ಷೆ ನಡೆಸುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಪರೀಕ್ಷೆಗೆ ತಡೆ ನೀಡಲಾಗಿದೆ.
ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿಯೂ ಪರೀಕ್ಷೆ ನಡೆಸಬೇಕೆಂದು ಅರ್ಜಿದಾರರು ವಾದಿಸಿದ್ದಾರೆ. ಇದನ್ನು ಪುರಸ್ಕರಿಸಿರುವ ನ್ಯಾಯಾಲಯ, ಪ್ರಾದೇಶಿಕ ಭಾಷೆಯ ವಿದ್ಯಾರ್ಥಿಗಳಲ್ಲಿ ಅದ್ಭುತ ಪ್ರತಿಭೆ ಇರಬಹುದು. ಇಂಗ್ಲಿಷ್, ಹಿಂದಿ ಬರಲ್ಲ ಎನ್ನುವ ಕಾರಣಕ್ಕೆ ಅವರು ಪರೀಕ್ಷೆಯನ್ನು ಬರೆಯಬಾರದು ಎನ್ನುವುದು ಸರಿಯಲ್ಲ. ಕೇವಲ ಎರಡು ಭಾಷೆ ತಿಳಿದಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗಳನ್ನು ಅವಕಾಶದಿಂದ ವಂಚಿತರಾಗಿ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಹೈಕೋರ್ಟ್, ನವೆಂಬರ್ 7 ರಂದು ನಿಗದಿಯಾಗಿದ್ದ ಪರೀಕ್ಷೆಯನ್ನು ರದ್ದುಪಡಿಸಿದೆ.