ಬೆಂಗಳೂರು: ಎಲೆಕ್ಟ್ರಿಕ್ ಸ್ಕೂಟರ್ ಟೆಸ್ಟ್ ಡ್ರೈವ್ ವೇಳೆ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಇಂಜಿನಿಯರಿಂಗ್ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಕೋರಮಂಗಲದ ಒಳ ವರ್ತುಲ ರಸ್ತೆಯ ಏರ್ ವೀವ್ ಜಂಕ್ಷನ್ ನಲ್ಲಿ ನಡೆದಿದೆ.
ಕೋರಮಂಗಲದ ಧ್ಯಾನ್ ಶ್ಯಾಮ್(20) ಮೃತಪಟ್ಟ ವಿದ್ಯಾರ್ಥಿ ಎಂದು ಹೇಳಲಾಗಿದೆ. ಭಾನುವಾರ ಮಧ್ಯಾಹ್ನ 2.40 ರ ಸುಮಾರಿಗೆ ಘಟನೆ ನಡೆದಿದೆ.
ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಮುಂದಾಗಿದ್ದ ಧ್ಯಾನ್ ಶ್ಯಾಮ್ ಭಾನುವಾರ ಮಧ್ಯಾಹ್ನ ಕೋರಮಂಗಲದ ಶೋರೂಮ್ ನಲ್ಲಿ ಸ್ಕೂಟರ್ ಪಡೆದು ಟೆಸ್ಟ್ ಡ್ರೈವ್ ಮಾಡಲು ತೆರಳಿದ್ದ ವೇಳೆ ನಿಯಂತ್ರಣ ತಪ್ಪಿದ ಸ್ಕೂಟರ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಧ್ಯಾನ್ ಶ್ಯಾಮ್ ಗಂಭೀರವಾಗಿ ಗಾಯಗೊಂಡಿದ್ದಾನೆ.
ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ತೀವ್ರ ರಕ್ತಸ್ರಾವದಿಂದ ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಅತಿ ವೇಗದ ಚಾಲನೆ ಅಪಘಾತಕ್ಕೆ ಕಾರಣವೆಂದು ಹೇಳಲಾಗಿದೆ.