ಶಿವಮೊಗ್ಗ: ಶಿವಮೊಗ್ಗದಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರರ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದ್ದು ಪ್ರೇಮ್ ಸಿಂಗ್ ಗೆ ಚಾಕು ಇರಿತ ಪ್ರಕರಣದಿಂದ ಎಂಬ ಮಾಹಿತಿ ಲಭ್ಯವಾಗಿದೆ.
ಸಾವರ್ಕರ್ ಭಾವಚಿತ್ರ ವಿವಾದದ ವೇಳೆ ಆಗಸ್ಟ್ 15ರಂದು ಶಿವಮೊಗ್ಗದಲ್ಲಿ ಯುವಕ ಪ್ರೇಮ್ ಸಿಂಗ್ ಎಂಬಾತನಿಗೆ ದುಷ್ಕರ್ಮಿಗಳು ಚಾಕು ಇರಿದು ಪರಾರಿಯಾಗಿದ್ದರು. ಪ್ರಕರಣದ ಆರೋಪಿ ಜಬೀವುಲ್ಲಾ ಎಂಬಾತನ ವಿಚಾರಣೆ ವೇಳೆ ಮೂವರು ಉಗ್ರರ ಬಗ್ಗೆ ಮಾಹಿತಿ ಹೊರಹಾಕಿದ್ದ ಎನ್ನಲಾಗಿದೆ.
ಪ್ರೇಮ್ ಸಿಂಗ್ ಚಾಕು ಇರಿತ ಪ್ರಕರಣದ ತನಿಖೆಗಾಗಿ ಭದ್ರಾವತಿ ಡಿ ವೈ ಎಸ್ ಪಿ ಜಿತೇಂದ್ರ ಅವರನ್ನು ನೇಮಕ ಮಾಡಲಾಗಿತ್ತು. ತನಿಖೆ ವೇಳೆ ಡಿ ವೈ ಎಸ್ ಪಿ ಜಿತೇಂದ್ರ, ಜಬಿವುಲ್ಲಾ ಎಂಬಾತನ ಮೊಬೈಲ್ ಪರಿಶೀಲನೆ ನಡೆಸಿದ್ದರು. ಈ ವೇಳೆ ಉಗ್ರ ಸಂಘಟನೆ ಜೊತೆ ನಿರಂತರ ಸಂಪರ್ಕ ಹೊಂದಿರುವುದು ಗೊತ್ತಾಗಿದೆ. ಅಲ್ಲದೇ ಜಬಿವುಲ್ಲಾ ಮೇಲೆ ಮೂಲಭೂತವಾದಿಗಳು ಪ್ರಭಾವ ಇರುವುದು ಕೂಡ ಗೊತ್ತಾಗಿದೆ.
ತನಿಖೆ ತೀವ್ರಗೊಳಿಸಿದ ಶಿವಮೊಗ್ಗ ಪೊಲೀಸರು ಇದೀಗ ಐಸಿಸ್ ಜೊತೆ ಸಂಪರ್ಕಹೊಂದಿದ್ದ ಹಾಗೂ ರಾಜ್ಯದ ವಿವಿಧೆಡೆ ಭಯೋತ್ಪಾದಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಇನ್ನೋರ್ವ ಪರಾರಿಯಾಗಿದ್ದಾನೆ. ಯಾಸಿನ್ ಹಾಗೂ ಮಾಜ್ ಎಂಬಾತನನ್ನು ಬಂಧಿಸಲಾಗಿದ್ದು, ಇನ್ನೋರ್ವ ಆರೋಪಿ ಶಾರಿಕ್ ಗಾಗಿ ಶೋಧ ನಡೆದಿದೆ.