ಬದೌನ್: ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಸೋಮವಾರ ಶಾಲಾ ವ್ಯಾನ್ ಮತ್ತು ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮಕ್ಕಳು ಸೇರಿದಂತೆ 5 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನವಗಂಜ್ ಗ್ರಾಮದ ಬಳಿ ಸೋಮವಾರ ಬೆಳಿಗ್ಗೆ ಈ ಅಪಘಾತ ಸಂಭವಿಸಿದೆ. ಮಾರುತಿ ವ್ಯಾನ್ ವಿದ್ಯಾರ್ಥಿಗಳನ್ನು ಎಸ್ಆರ್ಪಿಎಸ್ ಆಂಗ್ಲ ಮಾಧ್ಯಮ ಶಾಲೆಗೆ ಕರೆದೊಯ್ಯುತ್ತಿದ್ದಾಗ ಬೆಳಿಗ್ಗೆ 8 ಗಂಟೆ ಸುಮಾರಿಗೆ ಇಂಟರ್ ಕಾಲೇಜಿನ ಬಸ್ ಮುಂಭಾಗದಿಂದ ಡಿಕ್ಕಿ ಹೊಡೆದಿದೆ.
ವ್ಯಾನ್ ನ ಚಾಲಕ ಓಮೇಂದ್ರ (28), ವಿದ್ಯಾರ್ಥಿಗಳಾದ ಪಾರುಲ್ (9), ಖುಷಿ (6), ಹರ್ಷಿತ್ ಮತ್ತು ಇನ್ನೋರ್ವ ಅಪರಿಚಿತ ಮಗು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.
ಗಾಯಗೊಂಡವರಲ್ಲಿ ಆರು ಮಕ್ಕಳ ಸ್ಥಿತಿ ಜಿಲ್ಲಾ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನಲ್ಲಿ ಗಂಭೀರವಾಗಿದೆ. ಸುಮಾರು 20 ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ವ್ಯಾನ್ ರಸ್ತೆಯ ಗುಂಡಿಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್ ಗೆ ಡಿಕ್ಕಿ ಹೊಡೆದಿದೆ ಎಂದು ಸ್ಥಳದಲ್ಲೇ ಜನರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಮತ್ತೊಂದು ಅಪಘಾತ
ಹರ್ದೋಯ್ ಜಿಲ್ಲೆಯ ಖಮಾರಿಯಾ ಗ್ರಾಮದ ಬಳಿ ಸೋಮವಾರ ವಾಹನವು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಐದು ಜನರು ಸಾವನ್ನಪ್ಪಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ನಾಲ್ಕು ಚಕ್ರದ ವಾಹನ ಅಪಘಾತಕ್ಕೀಡಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದಲ್ಲಿ ವಾಹನವು ತೀವ್ರವಾಗಿ ಜಖಂಗೊಂಡಿದೆ ಮತ್ತು ಕಾರಿನಲ್ಲಿ ಪ್ರಯಾಣಿಸುತ್ತಿದ್ದವರನ್ನು ಹೊರತೆಗೆಯಲು ಗ್ಯಾಸ್ ಕಟ್ಟರ್ ಗಳನ್ನು ಬಳಸಲಾಗಿದೆ.