ಮಧ್ಯ ಇರಾನ್ ನಲ್ಲಿ ಪಾಕಿಸ್ತಾನಿ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಪಲ್ಟಿಯಾದ ಪರಿಣಾಮ 35 ಜನರು ಸಾವನ್ನಪ್ಪಿದ್ದಾರೆ ಮತ್ತು 18 ಜನರು ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಯಾಜ್ದ್ ಪ್ರಾಂತ್ಯದಲ್ಲಿ ಮಂಗಳವಾರ ತಡರಾತ್ರಿ ಈ ಅಪಘಾತ ಸಂಭವಿಸಿದ್ದು, ಬಸ್ ನ ಬ್ರೇಕಿಂಗ್ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷವೇ ಇದಕ್ಕೆ ಕಾರಣ ಎಂದು ಇರಾನ್ ಸಂಚಾರ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಬಸ್ ಮುಖ್ಯವಾಗಿ ಲರ್ಕಾನಾ, ಘೋಟ್ಕಿ ಮತ್ತು ಸಿಂಧ್ನ ಇತರ ನಗರಗಳಿಂದ 53 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು.
“ದುರದೃಷ್ಟವಶಾತ್, ಈ ಅಪಘಾತದಲ್ಲಿ 11 ಮಹಿಳೆಯರು ಮತ್ತು 17 ಪುರುಷರು ಪ್ರಾಣ ಕಳೆದುಕೊಂಡಿದ್ದಾರೆ. ಗಾಯಗೊಂಡವರಲ್ಲಿ ಏಳು ಜನರ ಸ್ಥಿತಿ ಗಂಭೀರವಾಗಿದೆ ಮತ್ತು ಗಾಯಗೊಂಡ ಆರು ಜನರು ಈಗ ಆಸ್ಪತ್ರೆಯಿಂದ ಹೊರಹೋಗಿದ್ದಾರೆ” ಎಂದು ಯಾಜ್ದ್ ಪ್ರಾಂತ್ಯದ ಬಿಕ್ಕಟ್ಟು ನಿರ್ವಹಣಾ ಮಹಾನಿರ್ದೇಶಕರು ತಿಳಿಸಿದ್ದಾರೆ.ಬ್ರೇಕ್ ವೈಫಲ್ಯದಿಂದಾಗಿ ಬಸ್ ಪಲ್ಟಿಯಾಗಿ ನಂತರ ಬೆಂಕಿ ಹೊತ್ತಿಕೊಂಡಿದೆ.