ಮುಂಬೈ: ಮುಂಬೈ-ಪುಣೆ ಎಕ್ಸ್ ಪ್ರೆಸ್ ವೇಯಲ್ಲಿ ಪಂಢರಪುರಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು 42 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಮುಂಬೈ ಬಳಿಯ ಡೊಂಬಿವ್ಲಿಯಿಂದ ಆಷಾಢ ಏಕಾದಶಿ ಆಚರಣೆಗಾಗಿ ಸೋಲಾಪುರ ಜಿಲ್ಲೆಯ ಪಂಢರಪುರಕ್ಕೆ ವಿಠ್ಠಲನ ಭಕ್ತರಾದ 54 ಯಾತ್ರಾರ್ಥಿಗಳನ್ನು ಬಸ್ ಕರೆದೊಯ್ಯುತ್ತಿತ್ತು.ನವೀ ಮುಂಬೈನ ಪನ್ವೇಲ್ ಬಳಿ ಈ ಅಪಘಾತ ಸಂಭವಿಸಿದೆ ಎಂದು ಉಪ ಪೊಲೀಸ್ ಆಯುಕ್ತ ವಿವೇಕ್ ಪನ್ಸಾರೆ ತಿಳಿಸಿದ್ದಾರೆ.
ವೇಗವಾಗಿ ಬಂದ ಬಸ್ ಟ್ರ್ಯಾಕ್ಟರ್ ಅನ್ನು ಓವರ್ಟೇಕ್ ಮಾಡಲು ಪ್ರಯತ್ನಿಸುವಾಗ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್ಸಿನಲ್ಲಿದ್ದ ಮೂವರು ಪ್ರಯಾಣಿಕರು ಮತ್ತು ಟ್ರ್ಯಾಕ್ಟರ್ ನಲ್ಲಿದ್ದ ಇಬ್ಬರು ವ್ಯಕ್ತಿಗಳಾದ ಚಾಲಕ ತರ್ವೇಜ್ ಸಲಾಹುದ್ದೀನ್ ಅಹ್ಮದ್ (27) ಮತ್ತು ದೀಪಕ್ ಸೋಹನ್ ರಾಜ್ಭರ್ (30) ಸಾವನ್ನಪ್ಪಿದ್ದಾರೆ.ಟ್ರಾಕ್ಟರ್ಗೆ ಡಿಕ್ಕಿ ಹೊಡೆದ ನಂತರ, ಬಸ್ ಎಕ್ಸ್ಪ್ರೆಸ್ವೇಯ ಬ್ಯಾರಿಕೇಡ್ ಮುರಿದು 20 ಅಡಿ ಆಳದ ಕಮರಿಗೆ ಬಿದ್ದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.