ಉತ್ತರಪ್ರದೇಶದ ಮೊರಾದಾಬಾದ್‌ನಲ್ಲಿ ವಿಶಿಷ್ಟ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಬ್ಯಾಂಕ್ ಆಫ್ ಬರೋಡಾ ಶಾಖೆಯ ಲಾಕರ್‌ನಲ್ಲಿ ಗ್ರಾಹಕರ ಹಣವನ್ನು ಇರಿಸಲಾಗಿತ್ತು. ಹಲವು ತಿಂಗಳ ನಂತರ ಆಕೆ ಹಣವನ್ನು ಹಿಂಪಡೆಯಲು ಹೋದಾಗ ಅಕ್ಷರಶಃ ಆಘಾತಕ್ಕೊಳಗಾಗಿದ್ದರು.
ಗ್ರಾಹಕ ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದ 18 ಲಕ್ಷ ರೂಪಾಯಿ ಹಣಕ್ಕೆ ಗೆದ್ದಲು ಹಿಡಿದಿತ್ತು. ನಗದು, ಚಿನ್ನಾಭರಣಗಳನ್ನು ಇರಿಸಿದ್ದ ಲಾಕರ್‌ನಲ್ಲಿದ್ದ ಬಹಳಷ್ಟು ನೋಟುಗಳು ಪುಡಿಯಾಗಿ ಹೋಗಿದ್ದವು. ನೋಟುಗಳನ್ನು ಗೆದ್ದಲು ತಿಂದು ಹಾಕಿದೆ. ಮಗಳ ಮದುವೆಗಾಗಿ ಕಷ್ಟಪಟ್ಟು ಕೂಡಿಟ್ಟಿದ್ದ ಲಕ್ಷಾಂತರ ರೂಪಾಯಿ ಗೆದ್ದಲು ಪಾಲಾಗಿದ್ದು ನೋಡಿ ಮಹಿಳೆ ಕುಸಿದು ಹೋಗಿದ್ದಾರೆ.
ಈ ಬಗ್ಗೆ ಶಾಖಾ ವ್ಯವಸ್ಥಾಪಕರಿಗೆ ಮಹಿಳೆ ಮಾಹಿತಿ ನೀಡಿದ್ರು. ಮೊರಾದಾಬಾದ್‌ನ ಆಶಿಯಾನಾದಲ್ಲಿ ವಾಸಿಸುತ್ತಿರುವ ಅಲ್ಕಾ ಪಾಠಕ್ ಎಂಬ ಮಹಿಳೆ ತನ್ನ ಕಿರಿಯ ಮಗಳ ಮದುವೆಗಾಗಿ ಚಿನ್ನಾಭರಣಗಳ ಜೊತೆಗೆ 18 ಲಕ್ಷ ರೂಪಾಯಿಯನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ರಾಮಗಂಗಾ ವಿಹಾರ್ ಶಾಖೆಯಲ್ಲಿ ಠೇವಣಿ ಮಾಡಿದ್ದಳು.
ಕಳೆದ ಸೋಮವಾರ ಮಹಿಳೆ ತನ್ನ KYC ಗಾಗಿ ಬಂದಿದ್ದು, ಹಣವನ್ನು ಪರಿಶೀಲಿಸಲು ಲಾಕರ್ ತೆರೆದಿದ್ದಾಳೆ. ಆಗ ನೋಟುಗಳನ್ನೆಲ್ಲ ಗೆದ್ದಲು ತಿಂದಿರೋದು ಬೆಳಕಿಗೆ ಬಂದಿದೆ. ಹಿರಿಯ ಮಗಳ ಮದುವೆಯಲ್ಲಿ ಅತಿಥಿಗಳಿಂದ ಪಡೆದ ಹಣವನ್ನು ಮಹಿಳೆ ಉಳಿತಾಯ ಮಾಡಿ ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದಳು. ಇದಲ್ಲದೆ ವ್ಯಾಪಾರ ಮತ್ತು ಟ್ಯೂಷನ್ ಹೇಳಿಕೊಡುವ ಮೂಲಕ ಅಷ್ಟೋ ಇಷ್ಟೋ ಸಂಪಾದಿಸಿ ಅದನ್ನೂ ಉಳಿತಾಯ ಮಾಡಿದ್ದಳು.
ಲಾಕರ್‌ನಲ್ಲಿ ಹಣ ಇಡಬಹುದೇ ಅಥವಾ ಇಲ್ಲವೇ ಎಂಬುದು ಆಕೆಗೆ ತಿಳಿದಿರಲಿಲ್ಲ. ಸದ್ಯ ಈ ಬಗ್ಗೆ ಬ್ಯಾಂಕ್ ತನಿಖೆ ಕೈಗೊಂಡಿದೆ. ವರದಿ ಬಂದ ಮೇಲಷ್ಟೆ ಮುಂದಿನ ಕ್ರಮ ಎಂದು ಸ್ಪಷ್ಟಪಡಿಸಿದೆ.