ಬೆಂಗಳೂರು: ಜಿ.ಎಸ್.ಟಿ. ಹೊರತುಪಡಿಸಿ ಕಾಮಗಾರಿಗಳಿಗೆ ಟೆಂಡರ್ ಕರೆಯುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರದಿಂದ ಅನುಮೋದಿಸಲಾದ ಏಕರೂಪ ಅನುಸೂಚಿ ದರಗಳ ಅನ್ವಯ ಅಂದಾಜು ಪಟ್ಟಿಯಲ್ಲಿ ಜಿಎಸ್‌ಟಿ ಮೊತ್ತ ಹೊರತುಪಡಿಸಿ ಟೆಂಡರ್ ಗಳನ್ನು ಆಹ್ವಾನಿಸಬೇಕು ಎಂದು ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ.
ಗುತ್ತಿಗೆದಾರರು ಟೆಂಡರ್ ಗೆ ಇಟ್ಟ ಮೊತ್ತಕ್ಕೆ ಜಿಎಸ್‌ಟಿ ಹೊರತುಪಡಿಸಿ ದರಗಳನ್ನು ತುಲನೆ ಮಾಡಿ ಎಲ್ -1 ಟೆಂಡರ್ ದಾರರನ್ನು ನಿರ್ಧರಿಸಲು ತಂತ್ರಾಂಶದಲ್ಲಿ ಕ್ರಮ ಕೈಗೊಳ್ಳಬೇಕು. ಟೆಂಡರ್ ಮೊತ್ತಕ್ಕೆ ಮಾತ್ರ ಇಎಂಡಿ, ಭದ್ರತೆ ಪಡೆಯಬೇಕು. ಟೆಂಡರ್ ಗೆ ಇಟ್ಟ ಮೊತ್ತ ಮತ್ತು ಜಿಎಸ್‌ಟಿ ಮೊತ್ತ ಸೇರಿದಂತೆ ಒಟ್ಟಾರೆ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ಪಡೆದುಕೊಳ್ಳಬೇಕು ಎಂದು ರಾಜ್ಯದ ಎಲ್ಲಾ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ.
ಜಿಎಸ್‌ಟಿ ವ್ಯತ್ಯಾಸದ ಮೊತ್ತವನ್ನು ಸರ್ಕಾರದ ವತಿಯಿಂದ ಪಾವತಿಸಲು ಸುತ್ತೋಲೆ ಹೊರಡಿಸಲಾಗಿದೆ. ಮುಂದಿನ ಕಾಮಗಾರಿಗಳಿಗೆ ಪರಿಷ್ಕರಣೆಯಾದಂತೆ ಜಿಎಸ್‌ಟಿ ಪಾವತಿಸಲು ಸರ್ಕಾರ ಮತ್ತು ಗುತ್ತಿಗೆದಾರರು ಬದ್ಧರಾಗಿರುತ್ತಾರೆ ಎನ್ನುವ ಅಂಶವನ್ನು ಸೇರಿಸಿ ಪೂರಕ ಒಪ್ಪಂದ ಮಾಡಿಕೊಳ್ಳಬೇಕೆಂದು ಹೇಳಲಾಗಿದೆ. ಹೆಚ್ಚುವರಿ ಜಿಎಸ್‌ಟಿಯನ್ನು ಸರ್ಕಾರದ ವತಿಯಿಂದ ಪಾವತಿಸಬೇಕೆಂಬ ಗುತ್ತಿಗೆದಾರರ ಮನವಿಗೆ ಸರ್ಕಾರ ಸ್ಪಂದಿಸಿ ಕ್ರಮ ಕೈಗೊಂಡಿದೆ.