ಮಂಗಳೂರು: ಅಡ್ಯಾರು ಬಳಿಯ ಬೊಂಡ ಫ್ಯಾಕ್ಟರಿ ಹಾಗೂ ನ್ಯಾಚುರಲ್ ಐಸ್ಕ್ರೀಂ ಮಾರಾಟ ಮಳಿಗೆಯಲ್ಲಿ ಎಳನೀರು ಸೇವಿಸಿದ್ದ 137 ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಪ್ರಕರಣದ ಬೆನ್ನಲ್ಲೇ ಬೊಂಡ ಫ್ಯಾಕ್ಟರಿ ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಮಂಗಳೂರಿನ ಅಡ್ಯಾರು ಬಳಿಯ ಬೊಂಡ ಫ್ಯಾಕ್ಟರಿಯಲ್ಲಿ ಎಳನೀರು ಸೇವಿಸಿದ ಬಳಿಕ 137 ಜನರು ಅಸ್ವಸ್ಥರಾಗಿದ್ದರು. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯಾಧಿಕಾರಿ, ಜಿಲ್ಲಾಧಿಕಾರಿಗಳು ಬೊಂಡ ಫ್ಯಾಕ್ಟರಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಅಲ್ಲದೇ ಆಹಾರ ಸುರಕ್ಷತೆ, ಗುಣಮಟ್ಟದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಇದೇ ವೇಳೆ ತಾತ್ಕಾಲಿಕವಾಗಿ ಬೊಂಡ ಫ್ಯಾಕ್ಟರಿ ಬಂದ್ ಮಾಡುವಂತೆ ಆದೇಶ ನೀಡಿದ್ದಾರೆ.
ಬೊಂಡ ನೀರು, ಐಸ್ಕ್ರೀಂ ಸೇರಿದಂತೆ ಇತರ ಯಾವುದೇ ಆಹಾರವನ್ನು ಸದ್ಯಕ್ಕೆ ಮಾರಾಟ ಮಾಡದಂತೆ ಸೂಚಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ, ಬೊಂಡ ಫ್ಯಾಕ್ಟರಿಯಲ್ಲಿ ಎಳನೀರು ಕುಡಿದ 137 ಜನರು ಅಸ್ವಸ್ಥರಾಗಿದ್ದರು. ಹೊರರೋಗಿಗಳಾಗಿ 84 ಜನರು, ಒಳರೋಗಿಗಳಾಗಿ 53 ಜನರು ಚಿಕಿತ್ಸೆ ಪಡೆದಿದ್ದಾರೆ. ಮಂಗಳೂರು, ಬಂಟ್ವಾಳದ ಸರ್ಕಾರಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳಲ್ಲಿ 30 ಜನರಿಗೆ ಚಿಕಿತ್ಸೆ ಮುಂದುವರೆದಿದೆ. ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.
ಬೊಂಡ ಫ್ಯಾಕ್ಟರಿಯಲ್ಲಿ ಏಪ್ರಿಲ್ 8ರಂದು ಲೀಟರ್ ಲೆಕ್ಕದಲ್ಲಿ ಹಲವರು ಎಳನೀರು ಖರೀದಿಸಿದ್ದರು, ಅದನ್ನು ಸೇವಿಸಿದ ಮಾರನೇ ದಿನದಿಂದ ವಾಂತಿಭೇದಿ ಶುರುವಾಗಿ ತೀವ್ರ ಅಸ್ವಸ್ಥರಾಗಿದ್ದರು.