ಬೆಂಗಳೂರು: ರಸ್ತೆಯಲ್ಲಿ ಕಸ ತುಂಬಿದ ಕವರ್ ಎಸೆದಿದ್ದನ್ನು ಪ್ರಶ್ನಿಸಿದ ಮನೆ ಮಾಲೀಕನನ್ನೇ ಬಾಡಿಗೆದಾರ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಿದ್ದಪ್ಪ(70) ಕೊಲೆಯಾದವರು. ತುಮಕೂರು ಜಿಲ್ಲೆ ಶಿರಾ ಮೂಲದ ಪುನೀತ್(24) ಕೊಲೆ ಆರೋಪಿಯಾಗಿದ್ದಾನೆ. ಹಿಮಾಲಯ ಡ್ರಗ್ಸ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದ ಸಿದ್ದಪ್ಪ ಮಾದನಾಯಕನಹಳ್ಳಿಯಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಕೆಲವು ಮನೆಗಳನ್ನು ಬಾಡಿಗೆಗೆ ನೀಡಿದ್ದಾರೆ. ಇವರ ಮನೆಯೊಂದರಲ್ಲಿ ಪುನೀತ್ ಮತ್ತು ಆತನ ತಾಯಿ ವಾಸವಾಗಿದ್ದರು.
ಶುಕ್ರವಾರ ಬೆಳಗಿನ ಜಾವ ಮನೆಯ ಸಮೀಪವೇ ಕಸ ತುಂಬಿದ್ದ ಕವರ್ ಎಸೆದಿದ್ದ ಪುನೀತ್, ಗುಟ್ಕಾ ಉಗಿದಿದ್ದಾನೆ. ವಾಕಿಂಗ್ ಹೋಗಿ ವಾಪಸ್ ಬರುತ್ತಿದ್ದ ಸಿದ್ದಪ್ಪ ಇದನ್ನು ಗಮನಿಸಿ ರಸ್ತೆಯಲ್ಲಿ ಕಸ ಎಸೆಯದಂತೆ ಬೈದಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಪುನೀತ್ ಮನೆಗೆ ಹೋಗಿ ಮಚ್ಚು ತಂದು ಸಿದ್ದಪ್ಪ ಅವರ ಕುತ್ತಿಗೆಗೆ ಹೊಡೆದಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.