ದ್ವೀಪ ರಾಷ್ಟ್ರ ಶ್ರೀಲಂಕಾ ಆರ್ಥಿಕ ಸಂಕಷ್ಟದಿಂದ ನಲುಗಿದೆ. ಬೀದಿಗಿಳಿದಿದ್ದ ಜನ ಅಧ್ಯಕ್ಷರ ಮನೆಗೇ ನುಗ್ಗಿ ದಾಂಧಲೆ ನಡೆಸಿದ್ದು, ಪ್ರತಿಭಟನೆಗೆ ಮಣಿದು ಗೊಟಬಯ ರಾಜಪಕ್ಸೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸದ್ಯಕ್ಕೆ ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ಹಳಿಗೆ ಬರುವ ಸಾಧ್ಯತೆ ಇಲ್ಲವೆನ್ನಲಾಗಿದ್ದು, ಇದಕ್ಕೆ ತಾಜಾ ಉದಾಹರಣೆಯೊಂದು ಇಲ್ಲಿದೆ.
ಬ್ರಿಟನ್ ನ ಬರ್ಮಿಂಗ್ಹ್ಯಾಮ್ ನಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟ ನಡೆಯುತ್ತಿದ್ದು ಇದರಲ್ಲಿ ಶ್ರೀಲಂಕಾವನ್ನು ಪ್ರತಿನಿಧಿಸುತ್ತಿದ್ದ 9 ಮಂದಿ ಅಥ್ಲೀಟ್ ಗಳು ಹಾಗೂ ಒಬ್ಬ ಮ್ಯಾನೇಜರ್ ತಾವು ಪಾಲ್ಗೊಳ್ಳಬೇಕಿದ್ದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಬಳಿಕ ಕಣ್ಮರೆಯಾಗಿದ್ದಾರೆ.
ಈ ಕ್ರೀಡಾಪಟುಗಳು ಉದ್ದೇಶಪೂರ್ವಕವಾಗಿಯೇ ತಲೆಮರೆಸಿಕೊಂಡಿರಬಹುದು ಎಂದು ಹೇಳಲಾಗುತ್ತಿದ್ದು, ಬ್ರಿಟನ್ ನಲ್ಲೇ ಉಳಿದು ಉದ್ಯೋಗ ಪಡೆಯಲು ಯತ್ನಿಸಲು ಈ ನಿರ್ಧಾರ ಕೈಗೊಂಡಿರಬಹುದು ಎಂದು ಶಂಕಿಸಲಾಗಿದೆ. ನಾಪತ್ತೆಯಾದವರ ಪೈಕಿ ಮೂವರನ್ನು ಪೊಲೀಸರು ಪತ್ತೆ ಹಚ್ಚಿದ್ದರಾದರೂ ಅವರುಗಳ ಬಳಿ ಆರು ತಿಂಗಳ ವಿಸಾ ಅವಧಿ ಇರುವ ಕಾರಣ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ.