ರಾಜಸ್ತಾನದ ನಾಗೋರ ಜಿಲ್ಲೆಯ ಬುಟಾಟಿಯಲ್ಲಿರುವ ಚತುರದಾಸ ಮಹಾರಾಜ ದೇವಸ್ಥಾನ ಪ್ಯಾರಾಲಿಸಿಸ್ ರೋಗಿಗಳ ಪಾಲಿಗೆ ಪವಿತ್ರ ಸ್ಥಳವಾಗಿದೆ.
ಈ ದೇವಸ್ಥಾನಕ್ಕೆ ಅನೇಕ ಕಡೆಗಳಿಂದ ಭಕ್ತರು ಬರುತ್ತಾರೆ. ಈ ಬುಟಾಟಿ ದೇವಸ್ಥಾನವನ್ನು 7 ಬಾರಿ ಪ್ರದಕ್ಷಿಣೆ ಮಾಡಿ, ಅಲ್ಲಿನ ಯಜ್ಞ ಕುಂಡದಲ್ಲಿರುವ ಭಸ್ಮವನ್ನು ಲೇಪಿಸಿಕೊಂಡರೆ ಪ್ಯಾರಾಲಿಸಿಸ್ ರೋಗ ಕ್ರಮೇಣ ವಾಸಿಯಾಗುತ್ತದೆಯಂತೆ. ಪ್ರದಕ್ಷಿಣೆಯ ಹೊರತಾಗಿ ಅಲ್ಲಿ ಇನ್ಯಾವುದೇ ಚಿಕಿತ್ಸೆಯನ್ನು ನೀಡಲಾಗುವುದಿಲ್ಲ. ಈ ಪ್ರದಕ್ಷಿಣೆಯಿಂದ ಕೇವಲ ಪ್ಯಾರಾಲಿಸಿಸ್ ಮಾತ್ರವಲ್ಲ ಮಾತು ಬರದವರು ಕೂಡ ಮಾತನಾಡಲು ಆರಂಭಿಸುತ್ತಾರೆ ಎಂಬ ನಂಬಿಕೆ ಇದೆ.
ಸುಮಾರು 500 ವರ್ಷದ ಹಿಂದೆ ಇಲ್ಲಿ ಚತುರದಾಸ ಎಂಬ ಒಬ್ಬ ಸಿದ್ಧಯೋಗಿಗಳು ವಾಸವಿದ್ದರು. ಅವರು ತಮ್ಮ ತಪಸ್ಸಿನ ಶಕ್ತಿಯಿಂದ ಜನರ ರೋಗಗಳನ್ನು ಗುಣಪಡಿಸುತ್ತಿದ್ದರು ಎನ್ನಲಾಗುತ್ತದೆ. ಕಾಲಾಂತರದಲ್ಲಿ ಅವರ ದೇಹಾಂತವಾದ ಮೇಲೆ ಅಲ್ಲಿಯೇ ಅವರನ್ನು ಸಮಾಧಿ ಮಾಡಲಾಯಿತು.
ಇದೇ ಮುಂದೆ ದೊಡ್ಡ ದೇವಸ್ಥಾನವಾಗಿ ನಿರ್ಮಾಣವಾಯ್ತು. ತಪಸ್ವಿಯಾದ ಚತುರದಾಸರ ಸಮಾಧಿಯನ್ನು ಪ್ರದಕ್ಷಿಣೆ ಮಾಡಿದರೆ ಪ್ಯಾರಾಲಿಸಿಸ್ ರೋಗ ಗುಣವಾಗುತ್ತದೆ ಎಂಬ ನಂಬಿಕೆ ಪ್ರಚಲಿತದಲ್ಲಿದೆ. ವೈದ್ಯರ ಬಳಿ ಪರಿಹಾರ ಸಿಗದ ಹಲವಾರು ಪ್ಯಾರಾಲಿಸಿಸ್ ರೋಗಿಗಳು ಇಲ್ಲಿ ಬಂದು ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತಾರೆನ್ನಲಾಗಿದೆ.