ಕಲಬುರ್ಗಿ: ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಪ್ರಸಿದ್ಧ ದೇವಲ ಗಾಣಗಾಪುರ ದತ್ತಾತ್ರೇಯ ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್ಸೈಟ್ ಗಳನ್ನು ತೆರೆದು ಕೋಟ್ಯಂತರ ರೂಪಾಯಿ ವಂಚಿಸಿದ ಅರ್ಚಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಮುಜರಾಯಿ ಇಲಾಖೆಗೆ ಸೇರಿದ ದೇವಲ ಗಾಣಗಾಪುರ ದತ್ತಾತ್ರೇಯ ದೇವಸ್ಥಾನದ ಅಧಿಕೃತ ವೆಬ್ ಸೈಟ್ ಇದ್ದು, ಕೆಲವು ಅರ್ಚಕರು ಗೊಂದಲ ಮೂಡಿಸುವ ಹೆಸರುಗಳಲ್ಲಿ ನಕಲಿ ವೆಬ್ಸೈಟ್ಗಳನ್ನು ತೆರೆದಿದ್ದಾರೆ. ಭಕ್ತರನ್ನು ವಂಚಿಸಿ ಸರ್ಕಾರಿ ಖಜಾನೆಗೆ ಸೇರಬೇಕಿದ್ದ ಕೋಟ್ಯಾಂತರ ರೂಪಾಯಿಗಳನ್ನು ದೋಚಿದ್ದಾರೆ.
ಹೀಗೆ ಅಕ್ರಮವಾಗಿ ವೆಬ್ಸೈಟ್ ತೆರೆದು ವಂಚಿಸಿದ ಆರೋಪದ ಮೇಲೆ ಅರ್ಚಕರಾದ ವಲ್ಲಭ ಭಟ್ಟ ಪೂಜಾರಿ, ಅಂಕುರ್ ಪೂಜಾರಿ, ಪ್ರತೀಕ್ ಪೂಜಾರಿ, ಗಂಗಾಧರ ಭಟ್ಟ ಪೂಜಾರಿ, ಶರತ್ ಭಟ್ಟ ಪೂಜಾರಿ ಮೊದಲಾದವರ ವಿರುದ್ಧ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ದೂರು ನೀಡಿದ್ದು, ದೇವಲ ಗಾಣಗಾಪುರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.