ಬೆಂಗಳೂರು: ದೇವಸ್ಥಾನಗಳಲ್ಲಿ ಮೊಬೈಲ್ ಫೋನ್ ಬಳಕೆ ನಿಷೇಧ, 65 ವರ್ಷ ಮೇಲ್ಪಟ್ಟವರಿಗೆ ನೇರ ದರ್ಶನಕ್ಕೆ ಅವಕಾಶ ಕಲ್ಪಿಸುವ ಕುರಿತು ರಾಜ್ಯ ಧಾರ್ಮಿಕ ಪರಿಷತ್ ನಿರ್ಧಾರ ಕೈಗೊಂಡಿದೆ.
ಪರಿಷತ್ ಅಧ್ಯಕ್ಷರಾದ ಹಿಂದೂ ಧಾರ್ಮಿಕ ದತ್ತಿ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ನಡೆದ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ 65 ವರ್ಷ ಮೇಲ್ಪಟ್ಟವರಿಗೆ ಸರದಿ ಸಾಲಿನಲ್ಲಿ ನಿಲ್ಲದೆ ನೇರದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ದೇವಸ್ಥಾನಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗುವುದು. ಮೈಸೂರು ಶ್ರೀ ಚಾಮುಂಡೇಶ್ವರಿ ಬೆಟ್ಟಕ್ಕೆ ಪ್ರಾಧಿಕಾರ ರಚಿಸುವುದು ಸೇರಿದಂತೆ ಹಲವು ನಿರ್ಧಾರ ಕೈಗೊಳ್ಳಲಾಗಿದೆ.
ಕಾಶಿಯಾತ್ರೆಯಲ್ಲಿ ಹೊಸದಾಗಿ ಗಯಾ ಸೇರ್ಪಡೆಗೊಳಿಸಿದ್ದು, ಸಹಾಯಧನವನ್ನು 5 ಸಾವಿರದಿಂದ 7,500ರೂ.ಗೆ ಹೆಚ್ಚಳ ಮಾಡಲಾಗಿದೆ. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಾಲಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಅರ್ಚಕರು, ನೌಕರರಿಗೆ ಮೃತಪಟ್ಟಲ್ಲಿ 2 ಲಕ್ಷ ರೂಪಾಯಿ ಪರಿಹಾರ ನೀಡುವ ಯೋಜನೆ ಜಾರಿಗೊಳಿಸಲಾಗುವುದು. ಆಯುಷ್ಮಾನ್ ಭಾರತ್ ಯೋಜನೆಯಡಿ ಆರೋಗ್ಯ ಕಾರ್ಡ್ ವಿತರಿಸಲಿದ್ದು, ಮಕ್ಕಳ ಶಿಕ್ಷಣಕ್ಕಾಗಿ ವಾರ್ಷಿಕ ಪ್ರೋತ್ಸಾಹಧನ ನೀಡಲಾಗುವುದು.
ಪಿಯುಸಿ, ಐಟಿಐ, ಜೆಒಸಿ, ಡಿಪ್ಲೋಮಾ ವಿದ್ಯಾರ್ಥಿಗಳಿಗೆ 5000 ರೂ., ಪದವಿ ವಿದ್ಯಾರ್ಥಿಗಳಿಗೆ 7,000 ರೂ., ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ 15 ಸಾವಿರ ರೂ., ಆಯುರ್ವೇದಿಕ್, ಹೋಮಿಯೋಪಥಿ ಪದವಿ ವಿದ್ಯಾರ್ಥಿಗಳಿಗೆ 25 ಸಾವಿರ ರೂ., ಮೆಡಿಕಲ್, ಡೆಂಟಲ್ ವಿದ್ಯಾರ್ಥಿಗಳಿಗೆ 50,000 ರೂ., ವಿದೇಶ ವ್ಯಾಸಂಗ ವಿದ್ಯಾರ್ಥಿಗಳಿಗೆ ಒಂದು ಲಕ್ಷ ರೂ. ಪ್ರೋತ್ಸಾಹಧನ ನೀಡಲು ತೀರ್ಮಾನಿಸಲಾಗಿದೆ.