ಬೆಂಗಳೂರು: ದೇವಸ್ಥಾನಗಳ ಆದಾಯಕ್ಕೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕನ್ನ ಹಾಕುತ್ತಿದೆ ಎಂಬ ವಿಪಕ್ಷ ಬಿಜೆಪಿ ನಾಯಕರ ಆರೋಪಕ್ಕೆ ಇದೀಗ ದೇವಾಲಯಗಳ ಅರ್ಚಕರ ಸಂಘ ಸ್ಪಷ್ಟನೆ ನೀಡಿದೆ.
ರಾಜ್ಯದ ದೇವಾಲಗಳ ಹಣವನ್ನು ಸರ್ಕಾರ ಚರ್ಚ್, ಮಸೀದಿಗಳಿಗೆ ನೀಡುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ಇದರ ಬೆನ್ನಲ್ಲೇ ಅರ್ಚಕರ ಸಂಘ ಸುದ್ದಿಗೋಷ್ಠಿ ನಡೆಸಿದ್ದು, ದೇವಾಲಯಗಳ ಹಣ ದುರುಪಯೋಗವಾಗಿಲ್ಲ. ಇದು ಸುಳ್ಳು ಆರೋಪ ಎಂದು ತಿಳಿಸಿದೆ.
ಎ, ಬಿ, ಸಿ ದರ್ಜೆಯ ದೇವಾಲಯಗಳ ಹುಂಡಿ ಹಣ ದುರುಪಯೋಗವಾಗಿಲ್ಲ. ದೇವಾಲಯಗಳ ಹುಂಡಿ ಹಣವನ್ನು ಒಳ್ಳೆಯ ಕೆಲಸಗಳಿಗೆ ಉಪಯೋಗಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದೆ.
ಅರ್ಚಕರ ಸಂಘದ ಪ್ರಧಾನ ಕಾರ್ಯದರ್ಶಿ ದೀಕ್ಷಿತ್, ರಾಜ್ಯದ ಎ ದರ್ಜೆಯ ದೇವಸ್ಥಾಗಳ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ದೇವಸ್ಥಾನಗಳಲ್ಲಿ ನೂರಾರು ಕೋಟಿ ವ್ಯವಹಾರ ನಡೆಯುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷಗಳು ಆರೊಪಿಸುತ್ತಿವೆ. ಸರ್ಕಾರ ರಾಜ್ಯದ ದೇವಾಲಯಗಳ ಅಭಿವೃದ್ಧಿ ಕೆಲಸ ಮಾಡುತ್ತಿದೆ. ಅದನ್ನು ಸಹಿಸದೇ ಆರೋಪಿಸುವುದು ಸರಿಯಲ್ಲ. ದೇವಾಲಯಗಳಲ್ಲಿ ನಿತ್ಯ ಕೋಟ್ಯಂತರ ಹಣ ಸಂಗ್ರಹವಾಗುತ್ತಿರುವುದನ್ನು ಬಿಜೆಪಿಗೆ ಸಹಿಸಲಾಗುತ್ತಿಲ್ಲ. ಬಿಜೆಪಿಯವರೇ ದಯವಿಟ್ಟು ಅಪಪ್ರಚಾರ ಮಾಡುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ.