ಬೆಂಗಳೂರು: ರಾಜ್ಯದಲ್ಲಿ ದೇವಾಲಯ ತೆರವು ಪ್ರಕ್ರಿಯೆಗೆ ಪೂರ್ಣವಿರಾಮ ಹಾಕಲು ಬಿಜೆಪಿ ಸರ್ಕಾರ ಮುಂದಾಗಿದೆ.
ದಾವಣಗೆರೆಯಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ದೇವಾಲಯ ತೆರವು ಮಾಡುವಂತಹ ವಿಚಾರಗಳಿಗೆ ಹಾಕುವ ಬಗ್ಗೆ ತಿಳಿಸಿದ್ದಾರೆ.
ನಂಜನಗೂಡಿನಲ್ಲಿ ದೇಗುಲ ತೆರವಿನ ನಂತರ ಕಾನೂನು ತಜ್ಞರು ಮತ್ತು ಪಕ್ಷದ ಹಿರಿಯರೊಂದಿಗೆ ಚರ್ಚೆ ನಡೆಸಿದ್ದೇನೆ. ಈ ವಿಚಾರವಾಗಿ ಕೋರ್ಟಿನ ಹಲವು ತೀರ್ಪುಗಳು ಇದ್ದು, ಎಲ್ಲವನ್ನೂ ಗಮನಿಸಿ ಆಡಳಿತಾತ್ಮಕ ಮತ್ತು ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು. ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಹೇಳಿದ್ದಾರೆ.
ಇವತ್ತು ಸಚಿವ ಸಂಪುಟ ಸಭೆಯಲ್ಲಿ ದೇವಾಲಯಗಳ ರಕ್ಷಣೆಗೆ ಕಾನೂನು ಅಸ್ತ್ರ ಬಳಕೆ ಮಾಡುವ ಕುರಿತು ಚರ್ಚಿಸುವ ಸಾಧ್ಯತೆಯಿದೆ. ಕಾಯ್ದೆ ತಿದ್ದುಪಡಿ ಮಾಡಿ ದೇವಾಲಯಗಳನ್ನು ರಕ್ಷಿಸುವ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.
ದೇಗುಲ ತೆರವು ಪ್ರಕರಣದಿಂದ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಹಿಂದುಪರ ಸಂಘಟನೆಗಳ ಆಕ್ರೋಶ ತಣಿಸುವ ಮತ್ತು ಭಕ್ತರ ಭಾವನೆಗೆ ಧಕ್ಕೆ ತರದಿರಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.