ಭಾರತ ಆಧ್ಯಾತ್ಮ ಮತ್ತು ವೈಶಿಷ್ಠ್ಯಗಳ ಕೇಂದ್ರವಾಗಿದೆ. ನಮ್ಮ ದೇಶದಲ್ಲಿ ಸಾವಿರಾರು ಪುರಾತನ ದೇವಾಲಯಗಳಿದ್ದು ಒಂದಕ್ಕಿಂತ ಒಂದು ವಿಭಿನ್ನ ಹಾಗೂ ವಿಶೇಷತೆಯಿಂದ ಕೂಡಿದೆ. ಇವುಗಳಲ್ಲಿ ಹಲವು ದೇವಾಲಯಗಳು ಅತ್ಯಂತ ಅದ್ಭುತ ಮತ್ತು ರಹಸ್ಯಮಯವಾಗಿವೆ. ಕೆಲವರು ಇದನ್ನು ದೇವರ ಅಧ್ಬುತ ಎಂದರೆ, ಕೆಲವರು ಪೂರ್ವಜರ ಕಲೆ ಎನ್ನುತ್ತಾರೆ.
ಒರಿಸ್ಸಾದ ಪುರಿ ಜಗನ್ನಾಥ ದೇವಾಲಯ ಭಾರತದ ಅತ್ಯಂತ ಪ್ರಸಿದ್ದ ದೇವಾಲಯಗಳಲ್ಲಿ ಪ್ರಮುಖವಾದದ್ದು. ಮರದಿಂದಲೇ ನಿರ್ಮಿಸಲಾದ ಈ ದೇವಾಲಯದ ಮೇಲಿನ ಧ್ವಜವು ಯಾವಾಗಲೂ ಗಾಳಿ ಬೀಸುವ ವಿರುದ್ಧ ದಿಕ್ಕಿನಲ್ಲಿಯೇ ಹಾರುತ್ತದೆ.
ದೇವಾಲಯದ ಮೇಲಿರುವ ಸುದರ್ಶನ ಚಕ್ರವು 20 ಅಡಿ ಹಾಗೂ 1ಟನ್ ತೂಕವಿದ್ದು, ನಗರದ ಯಾವ ಭಾಗದಿಂದ ಬೇಕಾದರೂ ಇದನ್ನು ನೋಡಬಹುದಾಗಿದೆ. ಅಷ್ಟೇ ಅಲ್ಲದೆ ಈ ದೇವಾಲಯದ ಮೇಲೆ ಯಾವುದೇ ಪಕ್ಷಿಗಳು ಮತ್ತು ವಿಮಾನ ಹಾರುವುದಿಲ್ಲ.
ಕಾಮಾಖ್ಯ ದೇವಿ ದೇವಸ್ಥಾನ ಅಸ್ಸಾಂನ ರಾಜಧಾನಿ ಗುವಾಹಟಿಯ ಸಮೀಪದಲ್ಲಿದೆ. ಇಲ್ಲಿ ಯಾವುದೇ ವಿಗ್ರಹಗಳಿಲ್ಲ. ದೇವಿಯ ದೇಹದ ಭಾಗವನ್ನು ಪೂಜಿಸಲಾಗುತ್ತದೆ. ಈ ದೇವಾಲಯ ಶಕ್ತಿ-ಸಾಧನದ ಕೇಂದ್ರವಾಗಿದ್ದು ಇಲ್ಲಿ ಎಲ್ಲರ ಕೋರಿಕೆ ಈಡೇರುತ್ತದೆ ಎಂದು ನಂಬಿಕೆ ಇದೆ. ಈ ಕಾರಣದಿಂದ ಈ ದೇವಾಲಯಕ್ಕೆ ಕಾಮಾಖ್ಯ ಎಂದು ಹೆಸರು ಬಂದಿದೆ. ಇಲ್ಲಿ ಯಾವಾಗಲೂ ಕಲ್ಲಿನಿಂದ ನೀರು ಹರಿಯುತ್ತದೆ. ಈ ಕಲ್ಲಿನಿಂದ ತಿಂಗಳಿಗೊಮ್ಮೆ ರಕ್ತದ ಹೊಳೆ ಹರಿಯುತ್ತದೆ ಎಂದು ಹೇಳಲಾಗುತ್ತದೆ. ಇದು ಏಕೆ ಮತ್ತು ಹೇಗೆ ಎಂದು ವಿಜ್ಞಾನಿಗಳೂ ಪತ್ತೆ ಮಾಡಿಲ್ಲ.
ಹಿಮಾಚಲ ಪ್ರದೇಶದ ಕಾಳಿಧರ್ ಬೆಟ್ಟಗಳ ಮಧ್ಯೆ ಮಾತಾ ಜ್ವಾಲಾ ದೇವಿಯ ಪ್ರಸಿದ್ಧ ದೇವಸ್ಥಾನವಿದೆ. ಹಿಂದೂ ನಂಬಿಕೆಗಳ ಪ್ರಕಾರ, ಇಲ್ಲಿ ದೇವಿಯ ನಾಲಿಗೆ ಬಿದ್ದಿತ್ತೆಂಬ ಐತಿಹ್ಯವಿದೆ. ಇಲ್ಲಿ ಭೂಮಿಯಿಂದ ಜ್ವಾಲೆಯು ಹೊರಹೊಮ್ಮುತ್ತದೆ. ಈ ಜ್ವಾಲೆಯು ಒಂಬತ್ತು ಬಣ್ಣಗಳಿಂದ ಕೂಡಿದ್ದು, ಶಕ್ತಿ ದೇವಿಯ ಒಂಬತ್ತು ರೂಪಗಳೆಂದು ಪರಿಗಣಿಸಲಾಗಿದೆ. ದೇವಾಲಯದಲ್ಲಿ ಹೊರಹೊಮ್ಮುವ ಈ ಜ್ವಾಲೆಗಳು ಎಲ್ಲಿ ಹುಟ್ಟುತ್ತವೆ ಮತ್ತು ಅವುಗಳ ಬಣ್ಣಗಳು ಹೇಗೆ ಬದಲಾಗುತ್ತವೆ ಎನ್ನುವ ಮಾಹಿತಿ ಯಾರಿಗೂ ಸಹ ಲಭ್ಯವಿಲ್ಲ.
ಕರ್ಣಿ ಮಾತೆಯ ದೇವಸ್ಥಾನವು ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ದೇಶ್ನೋಕ್‌ನಲ್ಲಿದೆ. ದೇವಿಯ ದೇವಸ್ಥಾನದಲ್ಲಿ ಸುಮಾರು 2500 ಸಾವಿರ ಇಲಿಗಳಿವೆ. ಇಲ್ಲಿ ಇರುವ ಇಲಿಗಳು ಹೆಚ್ಚಾಗಿ ಕಪ್ಪು ಬಣ್ಣದಲ್ಲಿರುತ್ತವೆ. ಕೆಲವು ಬಿಳಿ ಮತ್ತು ಸಾಕಷ್ಟು ಅಪರೂಪದ ಜಾತಿಗಳಾಗಿವೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಬಿಳಿ ಇಲಿಯನ್ನು ನೋಡಿದವರಿಗೆ, ಅವರ ಇಷ್ಟಾರ್ಥಗಳು ಈಡೇರುತ್ತದೆ ಎಂಬ ನಂಬಿಕೆ. ಇಲಿಗಳು ಯಾರಿಗೂ ತೊಂದರೆ ಕೊಡದೆ ದೇವಸ್ಥಾನದಲ್ಲಿ ಓಡಾಡಿಕೊಂಡಿರುವುದು ಅತ್ಯಂತ ಅಚ್ಚರಿಯ ಸಂಗತಿ. ದೇವಸ್ಥಾನದಲ್ಲಿ ಇಲಿಗಳ ಸಂಖ್ಯೆ ಎಷ್ಟರಮಟ್ಟಿಗಿದೆಯೆಂದರೆ ಭಕ್ತರು ನಡೆಯುವುದು ಸಹ ಕಷ್ಟ. ವಿಚಿತ್ರವೆಂದರೆ ದೇವಾಲಯದ ಹೊರಗೆ ಒಂದೇ ಒಂದು ಇಲಿ ಸಹ ಕಾಣಸಿಗುವುದಿಲ್ಲ.
ಕಾಲ ಭೈರವ ದೇವಾಲಯ ಪ್ರಾಚೀನ ದೇವಾಲಯ. ಮಧ್ಯಪ್ರದೇಶದ ಉಜ್ಜಯಿನಿ ನಗರದಿಂದ 8 ಕಿ.ಮೀ ದೂರದಲ್ಲಿದೆ. ಇಲ್ಲಿನ ಸಂಪ್ರದಾಯಗಳ ಪ್ರಕಾರ, ಭಕ್ತರು ಕಾಲಭೈರವನಿಗೆ ಮದ್ಯವನ್ನು ಮಾತ್ರ ಅರ್ಪಿಸುತ್ತಾರೆ. ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಮದ್ಯವನ್ನು ಕಾಲ ಭೈರವನ ವಿಗ್ರಹದ ಮುಖಕ್ಕೆ ಹಚ್ಚಿದ ತಕ್ಷಣ, ಕ್ಷಣಾರ್ಧದಲ್ಲಿ ಮಾಯವಾಗುತ್ತದೆ. ಇದು ಏಕೆ ಮತ್ತು ಹೇಗೆ ಎಂದು ಇಲ್ಲಿಯವರೆಗೆ ತಿಳಿದುಬಂದಿಲ್ಲ.