ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ತಾಪಮಾನ, ಬಿಸಿಗಾಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಜನರು ತತ್ತರಿಸಿ ಹೋಗಿದ್ದಾರೆ. ಇನ್ನು ಬಿಸಿಲ ಝಳದಲ್ಲೇ ಕೆಲಸ ಮಾಡುವ ಪೌರಕಾರ್ಮಿಕರು ಕಂಗೆಟ್ಟಿದ್ದಾರೆ. ಶಾಖದ ಹೊಡೆತಕ್ಕೆ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸದ ಅವಧಿ ಕಡಿಮೆ ಮಾಡುವಂತೆ ಪೌರಕಾರ್ಮಿಕರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ರಣಬಿಸಿಲಿನಿಂದ ಉಂಟಾಗಬಹುದಾದ ಸಮಸ್ಯೆ ತಡೆಗಟ್ಟಲು ಹಾಗೂ ರಕ್ಷಿಸಿಕೊಳ್ಲುವ ನಿಟ್ಟಿನಲ್ಲಿ ವೇತನ ಕಡಿತ ಮಾಡದೇ ಅರ್ಧ ದಿನ ರಜೆ ನೀಡುವಂತೆ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ, ಸಮಾಜ ಕಲ್ಯಾಣ ಇಲಾಖೆಗೆ ಪೌರಕಾರ್ಮಿಕರು ಪತ್ರ ಬರೆದಿದ್ದಾರೆ.
ಕಾರ್ಮಿಕರಿಗೆ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಹೆಚ್ಚುವರಿ ವಿರಾಮದ ಜೊತೆಗೆ ಕುಡಿಯುವ ನೀರು, ಒಆರ್ ಎಸ್ ಹಾಗೂ ಮಜ್ಜಿಗೆ ನೀಡುವ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಪೌರಕಾರ್ಮಿಕರು ಶಾಖ ಸಂಬಂಧಿತ ಕಾಯಿಲೆಗೆ ತುತ್ತಾಗುವ ಅಪಾಯವಿದೆ. ಕಳೆದ ಕೆಲ ವಾರಗಳಿಂದ ತಾಪಮಾನ ಹೆಚ್ಚಾಗಿದೆ. ಪೌರಕಾರ್ಮಿಕರು ದಣಿಯುತ್ತಿದ್ದಾರೆ. ಹಲವರಲ್ಲಿ ಆಯಾಸ, ತಲೆಸುತ್ತುವಿಕೆ ಕಾಣಿಸಿಕೊಳ್ಳುತ್ತಿದ್ದು, ಬೇಸಿಗೆ ಮಟ್ಟಿಗಾದರೂ ಕೆಲಸದ ಅವಧಿ ಕಡಿಮೆ ಮಾಡುವಂತೆ ಒತ್ತಾಯಿಸಿದ್ದಾರೆ.
ಪೌರ ಕಾರ್ಮಿಕರು ಮುಂಜಾನೆ 6 ಗಂಟೆಯಿಂದ ಕೆಲಸ ಆರಂಭಿಸುತ್ತಾರೆ. ಮಧ್ಯಾಹ್ನ 2 ಗಂಟೆಯವರೆಗೆ ಕೆಲಸ ಮಾಡಬೇಕು ಕೆಲವೊಮ್ಮೆ 2:30ರವರೆಗೂ ವಿಸ್ತರಿಸಲಾಗುತ್ತದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕರ ತಾಪಮಾನ ಹೆಚ್ಚುತ್ತಿರುವುದರಿಂದ ಮಧ್ಯಾಹ್ನ 11ಗಂಟೆಯಿಂದ 3 ಗಂಟೆಯವರೆಗೆ ಮನೆಯೊಳಗೆ ಇರಲು ಸೂಚಿಸಿದೆ. ಇದನ್ನು ಉಲ್ಲೇಖಿಸಿ ಕೆಲಸದ ಸಮಯ ಬೆಳಿಗ್ಗೆ 11 ಗಂಟೆಗೆ ಕಡಿತಗೊಳಿಸುವಂತೆ ಪೌರಕಾರ್ಮಿಕರ ಒಕ್ಕೂಟ ಆಗ್ರಹಿಸಿದೆ.