ಬೆಂಗಳೂರು: ರಾಜ್ಯಾದ್ಯಂತ ತಾಪಮಾನ ಕುಸಿದಿದ್ದು, ಮಾಗಿ ಚಳಿ ತೀವ್ರತೆ ಹೆಚ್ಚಾಗಿದೆ. ಹಿಂಗಾರು ಮಳೆ ದೂರವಾಗುತ್ತಿದ್ದಂತೆ ಬಿಸಿಲ ಬೇಗೆ ಹೆಚ್ಚಿತ್ತು. ಕಳೆದ ವಾರದಿಂದ ಚಳಿಯ ತೀವ್ರತೆ ಹೆಚ್ಚಾಗತೊಡಗಿದೆ.
ಬೆಂಗಳೂರು ಸೇರಿದಂತೆ ಅನೇಕ ಭಾಗದಲ್ಲಿ ಚಳಿ ಅಧಿಕವಾಗಿದ್ದು, ತಾಪಮಾನ ಕುಸಿತವಾಗಿದೆ. ಕರಾವಳಿ ಪ್ರದೇಶದಲ್ಲಿ ಸೆಖೆಯ ವಾತಾವರಣ ಇದೆ. ಬಹುತೇಕ ಭಾಗದಲ್ಲಿ ಬೆಳಿಗ್ಗೆಯೇ ಮಂಜು ಕವಿದ ವಾತಾವರಣ ಕಂಡು ಬರುತ್ತಿದ್ದು, ಜನ ಮನೆಯಿಂದ ಹೊರಬರದಂತಾಗಿದೆ. ಸಂಜೆಯೂ ಚಳಿಯ ತೀವ್ರತೆ ಹೆಚ್ಚಾಗಿರುವುದರಿಂದ ಬಹುತೇಕರು ಬೇಗನೆ ಮನೆ ಸೇರಿಕೊಳ್ಳತೊಡಗಿದ್ದಾರೆ.
ಕಳೆದ ವಾರಕ್ಕಿಂತ ಈ ವಾರ ಚಳಿಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಸರಾಸರಿ ಕನಿಷ್ಠ 17 ಡಿಗ್ರಿ ಸೆಲ್ಸಿಯಸ್, ಗರಿಷ್ಟ 27 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದ್ದು, ಉತ್ತರ ಒಳನಾಡಿನ ಎಲ್ಲ ಜಿಲ್ಲೆಗಳಲ್ಲಿ ತಾಪಮಾನ ಕಡಿಮೆಯಾಗಿದೆ. ಡಿಸೆಂಬರ್ 22ರಂದು ಬೀದರ್ ನಲ್ಲಿ ಕನಿಷ್ಠ ತಾಪಮಾನ 10.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಡಿಸೆಂಬರ್ 23 ರಂದು ವಿಜಯಪುರದಲ್ಲಿ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್ ನಷ್ಟು ಇದೆ.
ಜನವರಿ 15ರವರೆಗೂ ಚಳಿಯ ತೀವ್ರತೆ ಹೆಚ್ಚಾಗಿರುತ್ತದೆ. ಬೆಳಗ್ಗೆ, ಸಂಜೆ ಇಬ್ಬನಿ ಬೀಳುತ್ತದೆ. ಮೋಡ ಮುಸುಕಿದ ವಾತಾವರಣದ ವೇಳೆ ಹಗಲಿನಲ್ಲಿಯೂ ಚಳಿಯ ಅನುಭವವಾಗುತ್ತದೆ. ವಾಯು ವಿಹಾರಕ್ಕೆ ಹೋಗುವವರು ಎಚ್ಚರಿಕೆ ವಹಿಸಬೇಕು. ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವವರು, ಮಕ್ಕಳು, ಹಿರಿಯ ನಾಗರಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು. ಬಿಸಿ ಹಾಗೂ ಶುಚಿಯಾದ ಆಹಾರ ಸೇವಿಸಬೇಕು. ತೀವ್ರ ಶೀತ ಗಾಳಿ ಬೀಸುವುದರಿಂದ ನೆಗಡಿ, ಕೆಮ್ಮು ಬಾಧಿಸುವ ಆತಂಕವಿದೆ. ಬೆಚ್ಚನೆಯ ಉಡುಪು ಧರಿಸುವುದು ಒಳ್ಳೆಯದು ಎನ್ನಲಾಗಿದೆ.