ಕೋವಿಡ್ ಸಾಂಕ್ರಾಮಿಕದಿಂದಾಗಿ ಅನೇಕ ಕಲಾವಿದರ ಬಾಳು ಬೀದಿಗೆ ಬಂದಿದೆ. ಜೀವನ ನಿರ್ವಹಣೆ ಮಾಡಲು ಸಾಧ್ಯವಾಗದೇ ಅನೇಕ ಕಲಾವಿದರು ಪರದಾಡುತ್ತಿದ್ದಾರೆ. ಇದೇ ಸಾಲಿಗೆ ಸೇರಿರುವ ತೆಲುಗಿನ ಹಾಸ್ಯನಟ ರಘು ಕರುಮಂಚಿ ಬೇರೆ ದಾರಿಯಿಲ್ಲದೇ ಇದೀಗ ಮದ್ಯದ ಅಂಗಡಿಯನ್ನು ತೆರೆದಿದ್ದಾರೆ. ರಘು ಮದ್ಯದ ಅಂಗಡಿಯಲ್ಲಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವರದಿಗಳ ಪ್ರಕಾರ ಸೆಲೆಬ್ರಿಟಿ ಕಾಮಿಡಿ ನಟ ಕಳೆದ 2 ದಶಕಗಳಿಂದ ಸಿನಿಮಾ ರಂಗಕ್ಕೆ ಸೇವೆ ಸಲ್ಲಿಸುತ್ತಿದ್ದರು. ಆದರೆ ಕೋವಿಡ್ನಿಂದಾಗಿ ಇವರಿಗೆ ಯಾವುದೇ ಅವಕಾಶಗಳು ಸಿಗಲಿಲ್ಲ. ನಟಿಸಿದ ಸಿನಿಮಾಗಳೂ ರಿಲೀಸ್ ಆಗಲಿಲ್ಲ. ಇದಾದ ಬಳಿಕ ಅವರು ಹೈದರಾಬಾದ್ ಗಡಿಯಲ್ಲಿರುವ ತಮ್ಮ ತೋಟದಲ್ಲಿ ಕೆಲಸ ಆರಂಭಿಸಿದ್ರು.
ತೋಟದ ಕೆಲಸದಲ್ಲಿ ಉಳಿಸಿದ ಹಣದಲ್ಲಿ ರಘು ಇದೀಗ ಮದ್ಯದ ಅಂಗಡಿಯನ್ನು ತೆರೆದಿದ್ದಾರೆ. ಇದರಲ್ಲಿ ತಮಗೆ ಒಳ್ಳೆಯ ಲಾಭ ಸಿಗಬಹುದು ಎಂಬ ನಿರೀಕ್ಷೆಯಲ್ಲಿಯೂ ಇದ್ದಾರೆ. ನಲ್ಗೊಂಡಾ ಜಿಲ್ಲೆಯ ಗಡಿ ಪ್ರದೇಶದ ಬೈಪಾಸ್ನಲ್ಲಿ ಡಿಸೆಂಬರ್ 1ರಂದು ಈ ಅಂಗಡಿಯನ್ನು ಆರಂಭಿಸಿದ್ದಾರೆ.
ಮದ್ಯದ ಅಂಗಡಿ ನಡೆಸುತ್ತಿರುವ ರಘು ಸ್ನೇಹಿತ ಸಾಯಿರಾಮ್ ರೆಡ್ಡಿ ಹರಿನಾಥ್ರನ್ನು ಸಂಪರ್ಕಿಸಿ ಅವರೊಂದಿಗೆ ಮದ್ಯದಂಗಡಿ ಆರಂಭಿಸಿದರು. ತೆಲಂಗಾಣ ಸರ್ಕಾರದ ವತಿಯಿಂದ ಆಯೋಜಿಸಲಾದ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ರಘು ಹಾಗೂ ಆತನ ಮೂವರು ಸ್ನೇಹಿತರು ಟೆಂಡರ್ ಪಡೆದಿದ್ದರು.
ಮದ್ಯದಂಗಡಿಗೆ ಬರುವ ಸ್ಥಳೀಯರು ರಘು ಅವರನ್ನು ಗುರುತಿಸಿದ್ದಾರೆ. ಅಲ್ಲದೇ ಅನೇಕರು ರಘು ಜೊತೆ ಫೋಟೋ ಕ್ಲಿಕ್ಕಿಸಿದ್ದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.