ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ.
ಉಕ್ರೇನ್ ನಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ಉಭಯ ನಾಯಕರು ಚರ್ಚಿಸಿದ್ದಾರೆ. ಶೀಘ್ರವಾಗಿ ಯುದ್ಧ ನಿಲ್ಲಿಸಲು, ಸಂವಾದ ಮತ್ತು ರಾಜತಾಂತ್ರಿಕತೆಯ ಹಾದಿಯನ್ನು ಅನುಸರಿಸುವ ಅಗತ್ಯವನ್ನು ಪ್ರಧಾನಿ ಪುನರುಚ್ಚರಿಸಿದ್ದಾರೆ.
ಸಂಘರ್ಷಕ್ಕೆ ಯಾವುದೇ ಮಿಲಿಟರಿ ಪರಿಹಾರವಿಲ್ಲ. ಯಾವುದೇ ಶಾಂತಿ ಪ್ರಯತ್ನಗಳಿಗೆ ಭಾರತವು ಸಿದ್ಧವಾಗಿದೆ. ಅಗತ್ಯ ಸಹಕಾರ, ನೆರವು ನೀಡಲಿದೆ. ಯುಎನ್, ಅಂತರರಾಷ್ಟ್ರೀಯ ಕಾನೂನು ಮತ್ತು ಎಲ್ಲಾ ರಾಜ್ಯಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವ ಪ್ರಾಮುಖ್ಯತೆಯನ್ನು ಪ್ರಧಾನಿ ಪುನರುಚ್ಚರಿಸಿದ್ದಾರೆ.
ನವೆಂಬರ್ 2021 ರಲ್ಲಿ ಗ್ಲಾಸ್ಗೋದಲ್ಲಿ ನಡೆದ ಅವರ ಕೊನೆಯ ಸಭೆಯ ನಂತರ ಉಭಯ ನಾಯಕರು ದ್ವಿಪಕ್ಷೀಯ ಸಹಕಾರದ ಪ್ರಮುಖ ಕ್ಷೇತ್ರಗಳ ಬಗ್ಗೆಯೂ ಮಾತನಾಡಿದ್ದಾರೆ ಎಂದು ಪ್ರಧಾನಿ ಕಚೇರಿಯಿಂದ ಮಾಹಿತಿ ನೀಡಲಾಗಿದೆ.