ಹೈದರಾಬಾದ್: ಅಕ್ಕ-ತಂಗಿ ಇಬ್ಬರೂ ಸಾಫ್ಟ್ ವೇರ್ ಇಂಜಿನಿಯರ್… ಕೈತುಂಬ ಸಂಬಳ… ವರ್ಕ್ ಫ್ರಂ ಹೋಂ …ಆದರೆ ಅಕ್ಕ ಏಕಾಏಕಿ ನಿಗೂಢವಾಗಿ ಸಾವನ್ನಪಿದ್ದು, ತಂಗಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಘಟನೆ ತೆಲಂಗಾಣದ ಜಗಿತ್ಯಾಲ ಜಿಲ್ಲೆಯ ಕೋರುಟ್ಲಾ ಪಟ್ಟಣದ ಭೀಮುನಿ ದುಬ್ಬಾ ಪ್ರದೇಶದಲ್ಲಿ ನಡೆದಿದೆ.
ಭೀಮುನಿ ದುಬ್ಬಾದ ಶ್ರೀನಿವಾಸ್ ರೆಡ್ಡಿ ಹಾಗೂ ಮಾಧವಿ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು, ಓರ್ವ ಪುತ್ರ. ಹೆಣ್ಣುಮಕ್ಕಳಾದ ದೀಪ್ತಿ ಹಾಗೂ ಚಂದನಾ ಸಾಫ್ಟ್ ವೇರ್ ಇಂಜಿನಿಯರ್. ಮನೆಯಿಂದಲೇ ಕೆಲಸ ಮಾಡುತಿದ್ದರು. ಮಗ ಹೈದರಾಬಾದ್ ನಲ್ಲಿ ಓದುತ್ತಿದ್ದ. ಶ್ರೀನಿವಾಸ್ ಹಾಗೂ ಮಾಧವಿ ದಂಪತಿ ಹೆಣ್ಣುಮಕ್ಕಳಿಬ್ಬರನ್ನು ಮನೆಯಲ್ಲಿಯೇ ಬಿಟ್ಟು ಹೈದರಾಬಾದ್ ಗೆ ಹೋಗಿದ್ದರು. ಮನೆಗೆ ಫೋನ್ ಮಾಡಿದರೆ ದೀಪ್ತಿ ಹಾಗೂ ಚಂದನಾ ಫೋನ್ ರಿಸೀವ್ ಮಾಡುತ್ತಿರಲಿಲ್ಲ.
ಇದರಿಂದ ಗಾಬರಿಯಾದ ಶ್ರೀನಿವಾಸ್ ರೆಡ್ಡಿ, ಮನೆಯಲ್ಲಿ ಹೆಣ್ಣುಮಕ್ಕಳಿಬ್ಬರೇ ಇದ್ದಾರೆ. ಫೋನ್ ವರ್ಕ್ ಆಗುತ್ತಿಲ್ಲ ಹೋಗಿ ನೋಡಿ ಬರುವಂತೆ ಪಕ್ಕದ ಮನೆಯವರಿಗೆ ಕರೆ ಮಾಡಿ ಹೇಳಿದ್ದಾರೆ. ಪಕ್ಕದ ಮನೆಯವರು ಮನೆಗೆ ಬಂದು ನೋಡಿದರೆ ಹಿರಿಯ ಮಗಳು ದೀಪ್ತಿ ಸೋಫಾ ಮೇಲೆ ನಿಶ್ಚಲವಾಗಿ ಮಲಗಿದಂತೆಯೇ ಸಾವನ್ನಪ್ಪಿದ್ದಳು. ಮನೆಯಲ್ಲಿ ಯಾರೂ ಇರಲಿಲ್ಲ. ದೀಪ್ತಿ ಸಹೋದರಿ ಚಂದನಾ ನಾಪತ್ತೆಯಾಗಿದ್ದಾಳೆ.
ಈ ವಿಷಯವನ್ನು ಶ್ರೀನಿವಾಸ್ ರೆಡ್ಡಿ ಹಾಗೂ ಪೊಲೀಸರಿಗೆ ಪಕ್ಕದ ಮನೆಯವರು ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ಪೊಲೀಸರು ಅಚ್ಚರಿಗೊಂಡಿದ್ದಾರೆ. ಮನೆಯಲ್ಲಿದ್ದ ಮೃತಳ ಸಹೋದರಿ ನಾಪತ್ತೆಯಾಗಲು ಕಾರಣವೇನು? ಪತ್ತೆಗಾಗಿ ಬಸ್ ನಿಲ್ದಾಣದ ಬಳಿಯ ಸಿಸಿಟಿವಿ ಪರಿಶೀಲಿಸಿದ್ದಾರೆ. ಈ ವೇಳೆ ಚಂದನಾ ಓರ್ವ ಯುಕನೊಂದಿಗೆ ಬಸ್ ಹತ್ತುತ್ತಿದ್ದ ದೃಶ್ಯ ಸೆರೆಯಾಗಿದೆ. ಮನೆಯಿಂದಲೇ ಕೆಲಸ ಮಾಡುತ್ತಿದ್ದ ಸಹೋದರಿಯರಲ್ಲಿ ಓರ್ವಳು ನಿಗೂಢವಾಗಿ ಸಾವನ್ನಪ್ಪಿದ್ದು, ಇನ್ನೋರ್ವ ಸಹೋದರಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು, ಯುವತಿಯ ಸಾವು ಅನುಮಾನಕ್ಕೆ ಕಾರಣವಾಗಿದೆ. ಅಕ್ಕನನ್ನೇ ಹತ್ಯೆಗೈದು ಯುವಕನೊಂದಿಗೆ ತಂಗಿ ಪರಾರಿಯಾಗಿದ್ದಾಳಾ? ಎಂಬ ಶಂಕೆ ವ್ಯಕ್ತವಾಗಿದೆ. ಮೃತಳ ತಂಗಿಯ ಪತ್ತೆಗಾಗಿ ಹಾಗೂ ಆಕೆಯ ಜೊತೆಗಿದ್ದ ಯುವಕನ ಪತ್ತೆಗಾಗಿ ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ನಡೆಸಿದ್ದಾರೆ.