ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಎಸ್ ಆರ್ ಪಕ್ಷಕ್ಕೆ ತೀವ್ರ ಮುಖಭಂಗವಾಗಿದ್ದು, ಕಾಂಗ್ರೆಸ್ ಜಯಭೇರಿಯತ್ತ ಮುನ್ನುಗ್ಗಿದೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಅಭೂತಪೂರ್ವ ಮುನ್ನಡೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಿಎಂ ಅಭ್ಯರ್ಥಿ ರೇವಂತ ರೆಡ್ಡಿ ಅವರನ್ನು ಭೇಟಿಯಾದ ಹಿರಿಯ ಪೊಲೀಸ್ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲುಮುಟ್ಟಿದೆ.
ಇದೇ ವೇಳೆ ಹೈದರಾಬಾದ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ಡಿಸಿಎಂ ಡಿ.ಕೆ.ಶಿವಕುಮಾರ್, ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಇದು ನಮ್ಮ ಗೆಲುವಲ್ಲ, ತೆಲಂಗಾಣದ ಜನತೆಯ ಗೆಲುವು ಎಂದಿದ್ದಾರೆ.
ನಮ್ಮ ಶಾಸಕರಿಗೆ ಯಾವುದೇ ತೊಂದರೆ ಇಲ್ಲ. ಅನೇಕ ರಾಜ್ಯಗಳಿಂದ ನಾಯಕರು ಬಂದು ನಮ್ಮ ಶಾಸಕರನ್ನು ಕರೆದುಕೊಂಡು ಬರುವ ಕೆಲಸ ಮಾಡಿದ್ದಾರೆ. ತೆಲಂಗಾಣ ಜನರು ಪ್ರತ್ಯೇಕ ರಾಜ್ಯ ಕೊಟ್ಟಿದ್ದಕ್ಕೆ ಗೆಲ್ಲಿಸಿದ್ದಾರೆ. ಸೋನಿಯಾ ಗಾಂಧಿಯವರಿಗೆ ಕೃತಜ್ಞತೆಯಾಗಿ ಕಾಂಗ್ರೆಸ್ ಗೆಲ್ಲಿಸಿದ್ದಾರೆ ಎಂದು ಹೇಳಿದರು.