
ಹೈದರಾಬಾದ್: ತೆಲಂಗಾಣ ಪೊಲೀಸರು ನಕಲಿ ಕರೆನ್ಸಿ ದಂಧೆಯನ್ನು ಭೇದಿಸಿದ್ದಾರೆ. ಕಾಮರೆಡ್ಡಿ ಜಿಲ್ಲೆಯ ಬನ್ಸ್ವಾಡ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊಯ್ಯ ಗುಟ್ಟಾ ಪ್ರದೇಶದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕಡಪತ್ರಿ ರಾಜಗೋಪಾಲ್ ರಾವ್, ಹುಸೇನ್ ಪೀರಾ, ಕೊಲವರ ಕಿರಣ್ ಕುಮಾರ್, ಕೆಸ್ರೋಲೆ ರಾಮದಾಸ್ ಗೌಡ್, ರಾಧಾಕೃಷ್ಣ ಮತ್ತು ಅಜಯ್ ಈಶ್ವರ್ ಲೋಖಂಡೆ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಯ್ಯಗುಟ್ಟಾ ಬಾನ್ಸವಾಡ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಕಾರ್ ಅಡ್ಡಗಟ್ಟಿದಾಗ ಕಡಪತ್ರಿ ರಾಜಗೋಪಾಲ್ ರಾವ್, ಕೊಲವರ ಕಿರಣ್ ಕುಮಾರ್ ಮತ್ತು ಕೆಸ್ರೋಲೆ ರಾಮದಾಸ್ ಗೌಡ್ ಎಂಬ ಮೂವರು ವ್ಯಕ್ತಿಗಳು ಪತ್ತೆಯಾಗಿದ್ದಾರೆ.
ವಾಹನ ತಪಾಸಣೆ ನಡೆಸಿದಾಗ 30 ಲಕ್ಷ ರೂಪಾಯಿ ಮೌಲ್ಯದ ನಕಲಿ ನೋಟು ಪತ್ತೆಯಾಗಿದೆ. ಮುಂದಿನ ತನಿಖೆಯಲ್ಲಿ ಆರೋಪಿಗಳು ದೇಶಾದ್ಯಂತ ನಕಲಿ ನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ತಂಡದ ಭಾಗವಾಗಿರುವುದು ಬೆಳಕಿಗೆ ಬಂದಿದೆ.
ತೆಲಂಗಾಣ, ರಾಜಸ್ಥಾನ, ಕರ್ನಾಟಕ, ಉತ್ತರಾಖಂಡ ಮತ್ತು ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳ ಎಂಟು ಸದಸ್ಯರನ್ನು ಈ ಗ್ಯಾಂಗ್ ಒಳಗೊಂಡಿತ್ತು. ಪೊಲೀಸರ ಪ್ರಕಾರ, ಗ್ಯಾಂಗ್‌ನ ಕಾರ್ಯಾಚರಣೆಯು ಹೈದರಾಬಾದ್‌ನಲ್ಲಿ ನಕಲಿ ಕರೆನ್ಸಿ ಮುದ್ರಿಸಿ ದೇಶದ ಉದ್ದಗಲಕ್ಕೂ ಚಲಾವಣೆ ಮಾಡುತ್ತಿತ್ತು.
56 ಲಕ್ಷದ 90 ಸಾವಿರ ರೂಪಾಯಿ ಮೌಲ್ಯದ ನಕಲಿ ನೋಟು, ಪ್ರಿಂಟರ್, ಕಂಪ್ಯೂಟರ್, ಪೇಪರ್ ಕಟರ್ ಸೇರಿದಂತೆ ನಕಲಿ ನೋಟು ಮುದ್ರಿಸಲು ಬಳಸುತ್ತಿದ್ದ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತಲೆಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳಾದ ಕಮಲೇಶ್ ಮತ್ತು ಸುಖರಾಮ್‌ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.