ರಸ್ತೆ ಅಗಲೀಕರಣದ ಅಂಗವಾಗಿ ಕಡಿಯಲಾದ 15 ಮರಗಳನ್ನು ಕಸಿ ಮಾಡುವ ಮೂಲಕ ತೆಲಂಗಾಣದ ಅನಿವಾಸಿ ಭಾರತೀಯರೊಬ್ಬರು ಪರಿಸರ ಪ್ರೇಮವನ್ನು ಮೆರೆದಿದ್ದಾರೆ. ತಮ್ಮ ಹುಟ್ಟೂರಾದ ನಿಜಾಮಾಬಾದ್ ಜಿಲ್ಲೆಯ ಕಮ್ಮರಪಲ್ಲಿ ಗ್ರಾಮದಲ್ಲಿ ಈ ಒಂದು ಮಹತ್ವದ ಕಾರ್ಯವನ್ನು ಮಾಡಿದ್ದಾರೆ.
ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿ 70 ರಿಂದ 80 ವರ್ಷ ವಯಸ್ಸಿನ ದೈತ್ಯ ಮರಗಳನ್ನು ಕಿತ್ತುಹಾಕಲು ಅಧಿಕಾರಿಗಳು ನಿರ್ಧರಿಸಿದ್ದರು. ಗುಗ್ಗಿಲಂ ದೇವರಾಜು ಅವರು ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿರುವ ಅದೇ ಗ್ರಾಮದವರು. ಇಸ್ರೇಲ್ ಮಾದರಿಯಲ್ಲಿ ತಮ್ಮ ಊರಿನಲ್ಲಿಯೂ ಈ ಮರಗಳನ್ನು ಕಸಿ ಮಾಡುವ ಮೂಲಕ ಅವುಗಳ ಜೀವ ಉಳಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗ್ರಾಮಸ್ಥರೊಂದಿಗೆ ಕಾರ್ಯವಿಧಾನದ ಬಗ್ಗೆ ಚರ್ಚಿಸಿದರು. ಇದಕ್ಕೆ ತಗಲುವ ವೆಚ್ಚವನ್ನು ತಾವೇ ಭರಿಸುವುದಾಗಿ ಹೇಳಿದರು. ಇಷ್ಟಾದ ಮೇಲೆ ಸಂಬಂಧಪಟ್ಟ ಅಧಿಕಾರಿಗಳೂ ಸಹಮತ ವ್ಯಕ್ತಪಡಿಸಿದರು.
ತಜ್ಞರ ಮೇಲ್ವಿಚಾರಣೆಯಲ್ಲಿ, 15 ದೈತ್ಯ ಮರಗಳನ್ನು ಜೆಸಿಬಿ ಮೂಲಕ ರಸ್ತೆಯ ಎರಡೂ ಬದಿಗಳಿಂದ ಬೇರುಗಳೊಂದಿಗೆ ಎಚ್ಚರಿಕೆಯಿಂದ ತೆಗೆದುಹಾಕಲಾಯಿತು. ಸ್ವಲ್ಪ ಸಮಯದೊಳಗೆ ಬೇರುಸಹಿತ ಮರಗಳನ್ನು ಗ್ರಾಮ ಮತ್ತು ಸಮೀಪದ ಅರಣ್ಯ ಪ್ರದೇಶದಲ್ಲಿ ಇರುವ ಕ್ರೀಡಾ ಕೇಂದ್ರದಲ್ಲಿ ಮರು ನೆಡಲಾಗಿದೆ.