ಹೈದರಾಬಾದ್: ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳಿಗೆ ಸಿಕ್ಕಿಹಾಕಿಕೊಳ್ಳುವುದರಿಂದ ತಪ್ಪಿಸಿಕೊಳ್ಳಲು ಅಧಿಕಾರಿಯೊಬ್ಬ ಭಯದಿಂದ 5 ಲಕ್ಷ ರೂಪಾಯಿಗೆ ಬೆಂಕಿ ಹಚ್ಚಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಅಧಿಕಾರಿ ಮನೆಯಿಂದ ಭಾಗಶಃ ಸುಟ್ಟುಹೋದ ಕರೆನ್ಸಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದ್ದು, ಅಧಿಕಾರಿಯನ್ನು ಬಂಧಿಸಲಾಗಿದೆ.
ಭ್ರಷ್ಟಾಚಾರ ನಿಗ್ರಹದಳ(ಎಸಿಬಿ) ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯಂತೆ. ನಗರ್‌ಕುರ್ನೂಲ್ ಜಿಲ್ಲೆಯ ವೆಲ್ಡಾಂಡ ಮಂಡಲದ ತಹಶೀಲ್ದಾರ್ 5 ಲಕ್ಷ ರೂ. ಲಂಚದ ಹಣ ಸಂಗ್ರಹಿಸಿದ್ದರು. ತಹಶೀಲ್ದಾರ್ ಲಂಚ ಪಡೆದ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ನೋಟುಗಳನ್ನು ಸುಟ್ಟು ಹಾಕಲಾಗಿದೆ. 2000 ರೂಪಾಯಿ, ಮತ್ತು 500 ರೂಪಾಯಿ ಮುಖಬೆಲೆಯ ಭಾಗಶಃ ಸುಟ್ಟು ಹೋದ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.
ತಹಶೀಲ್ದಾರ್ ತಮ್ಮ ನಿವಾಸದಲ್ಲಿ 5 ಲಕ್ಷ ರೂ. ಪಡೆದುಕೊಂಡ ಸಂದರ್ಭದಲ್ಲಿ ದಾಳಿ ನಡೆಸಲಾಗಿದೆ. ಕ್ವಾರೆ ಗುತ್ತಿಗೆ ಪರವಾನಿಗೆ ನೀಡಲು ಎನ್ಒಸಿ, ಅನುಮತಿ ನೀಡಿ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಪತ್ರ ಕಳುಹಿಸಲು ಲಂಚ ಪಡೆದುಕೊಳ್ಳಲಾಗಿತ್ತು. ದಾಳಿ ವೇಲೆ ಮನೆಯೊಳಗಿಂದ ಬೋಲ್ಟ್ ಹಾಕಿಕೊಂಡು ಅಡುಗೆ ಮನೆಯ ಗ್ಯಾಸ್ ಸ್ಟವ್ ಮೇಲಿಟ್ಟು ಲಂಚದ ಹಣ ಸುಟ್ಟು ಹಾಕಿದ್ದಾರೆ. ಕಳೆದ ತಿಂಗಳು ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಇದೇ ರೀತಿಯ ಘಟನೆ ನಡೆದಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.