ಹೈದರಾಬಾದ್: ತೆಲಂಗಾಣ ಸರ್ಕಾರ ತಂಬಾಕು, ಗುಟ್ಕಾ, ಪಾನ್ ಮಸಾಲಾ ಸಂಪೂರ್ಣ ನಿಷೇಧ ಮಾಡಿ ಆದೇಶ ಹೊರಡಿಸಿದೆ.
ತಂಬಾಕು ಹಾಗೂ ನಿಕೋಟಿನ್ ಹೊಂದಿರುವ ಗುಟ್ಕಾ, ಪಾನ್ ಮಸಾಲಾ ತಯಾರಿಕೆ, ಸಂಗ್ರಹ ಹಾಗೂ ಮಾರಾಟವನ್ನು ಒಂದು ವರ್ಷದವರೆಗೆ ಸಂಪೂರ್ಣ ನಿಷೇಧಿಸಿ ತೆಲಂಗಾಣ ಸರ್ಕಾರ ಆದೇಶ ನೀಡಿದೆ.
ಮೇ 24, 2024ರಿಂದ ಒಂದು ವರ್ಷ ಅವಧಿಗೆ ಆದೇಶ ಜಾರಿಗೆ ಬರುವಂತೆ ನಿಷೇಧ ಹೇರಲಾಗಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿದ ಈ ನಿರ್ಧಾರ ಕೈಗೊಳ್ಳಲಾಗಿದೆ. ಗುಟ್ಕಾ ಹಾಗೂ ಪಾನ್ ಮಸಾಲ ಸೇವನೆಯಿಂದ ಗಂಭೀರವಾದ ಆರೋಗ್ಯ ಸಮಸ್ಯೆ ಅಪಾಯ ಇರುವ ಸಾಧ್ಯತೆ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಆಯುಕ್ತರ ಆದೇಶದ ಪ್ರಕಾರ ಆಹಾರ ಸುರಕ್ಷಎ ಮತ್ತು ಗುಣಮಟ್ಟ ಕಾಯಿದೆ 2006ರ ಅಡಿಯಲ್ಲಿ ನಿಷೇಧವನ್ನು ಜಾರಿಗೊಳಿಸಲಾಗಿದೆ.
ತೆಲಂಗಾಣ ರಾಜ್ಯ ಸ್ಥಾಪನೆಯಾದ 2014ರಲ್ಲಿ ಗುಟ್ಕಾ ನಿಷೇಧಿಸಲಾಗಿತ್ತು. ಬಳಿಕ 2021ರಲ್ಲಿ ತೆಲಂಗಾಣ ಹೈಕೋರ್ಟ್ ನಿಷೇಧ ಎತ್ತಿ ಹಿಡಿದಿತ್ತು. ಗುಟ್ಕಾ ತಯಾರಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 2022ರಲ್ಲಿ ನಿಷೇಧ ಅಧಿಸೂಚನೆ ಹಿಂಪಡೆಯಲಾಗಿತ್ತು. ಇದೀಗ ತೆಲಂಗಾಣದಲ್ಲಿ ಮತ್ತೆ ಗುಟ್ಕಾ, ತಂಬಾಕು, ಪಾನ್ ಮಸಾಲಾ ನಿಷೇಧಿಸಲಾಗಿದೆ.