ಹೈದರಾಬಾದ್: ತೆಲಂಗಾಣ ರಾಜ್ಯದ ಎಲ್ಲಾ ನಿವಾಸಿಗಳಿಗೆ ಕೋವಿಡ್ -19 ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ತೆಲಂಗಾಣ ಸರ್ಕಾರ ಘೋಷಿಸಿದೆ.
ತೆಲಂಗಾಣಕ್ಕೆ ಬಂದು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರಿಗೂ ಕೂಡ ಲಸಿಕೆ ನೀಡಲಾಗುವುದು. ಇದುವರೆಗೆ ರಾಜ್ಯದಲ್ಲಿ 35 ಲಕ್ಷ ಜನರಿಗೆ ಲಸಿಕೆ ನೀಡಿದ್ದು, ಎಲ್ಲರಿಗೂ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ 2500 ಕೋಟಿ ರೂಪಾಯಿ ಕಾಯ್ದಿರಿಸಿದೆ.
ಹಣ ಮುಖ್ಯವಲ್ಲ, ನಮಗೆ ಜನರ ಜೀವನ ಮುಖ್ಯವಾಗಿದೆ. ಹಾಗಾಗಿ ಎಲ್ಲರಿಗೂ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಘೋಷಿಸಿದ್ದಾರೆ.
ಉಚಿತವಾಗಿ ರಾಜ್ಯದ ಜನರಿಗೆ ಲಸಿಕೆ ನೀಡಲು ವ್ಯವಸ್ಥೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಏಪ್ರಿಲ್ 19 ರಂದು ಕೋವಿಡ್-19 ಟೆಸ್ಟ್ ಬನಲ್ಲಿ ಪಾಸಿಟಿವ್ ಬಂದ ನಂತರ ಅವರು ಹೋಮ್ ಐಸೋಲೇಷನ್ ನಲ್ಲಿದ್ದಾರೆ. ನೆಗೆಟಿವ್ ಬಂದ ನಂತರ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ.
ಮುಂದಿನ ಎರಡು ಮೂರು ದಿನಗಳಲ್ಲಿ ವ್ಯಾಕ್ಸಿನೇಷನ್ ಸಭೆ ನಡೆಸಿ ವೈಯಕ್ತಿಕವಾಗಿ ಮೇಲ್ವಿಚಾರಣೆ ನಡೆಸುವುದಾಗಿ ಚಂದ್ರಶೇಖರ ರಾವ್ ತಿಳಿಸಿದ್ದು, ಕೊರೋನಾಗೆ ಹೆದರಬೇಡಿ, ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ತಿಳಿಸಿದ್ದಾರೆ.