ತೆಲಂಗಾಣ: ಎತ್ತೊಂದು ಮೂತ್ರ ವಿಸರ್ಜನೆ ಮಾಡಿದ ಕಾರಣಕ್ಕೆ ರೈತನ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿರುವ ವಿಲಕ್ಷಣೆ ಘಟನೆ ತೆಲಂಗಾಣದ ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಯೆಲ್ಲಾಂಡುವಿನಲ್ಲಿ ನಡೆದಿದೆ. ಇಲ್ಲಿ ಸಿಂಗರೇಣಿ ಕಾಲೀಯರೀಸ್ ಕಂಪೆನಿ ಲಿಮಿಟೆಡ್ (ಎಸ್‌ಸಿಸಿಎಲ್) ಜನರಲ್ ಮ್ಯಾನೇಜರ್ ಕಚೇರಿಯ ಪ್ರವೇಶ ದ್ವಾರದಲ್ಲಿ ಎತ್ತು ಮೂತ್ರ ಮಾಡಿದ ಕಾರಣಕ್ಕೆ ಅದರ ಮಾಲೀಕನ ಮೇಲೆ ಕೇಸ್ ದಾಖಲು ಮಾಡಿದ್ದಾರೆ.
ಎಸ್‌ಸಿಸಿಎಲ್ ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡುವಂತೆ ಒತ್ತಾಯಿಸಲು ರೈತ ತನ್ನ ಎತ್ತಿನ ಗಾಡಿಯಲ್ಲಿ ಯೆಲ್ಲಾಂಡುವಿಗೆ ಆಗಮಿಸಿದ್ದ. ಈ ಸಂದರ್ಭದಲ್ಲಿ ಎತ್ತು ಮೂತ್ರ ಮಾಡಿದ್ದು, ಪೊಲೀಸರು ಕೇಸ್ ದಾಖಲು ಮಾಡಿದ್ದಾರೆ.
ಘಟನೆಯ ಸಿಸಿ ಟಿವಿ ದೃಶ್ಯಗಳನ್ನು ಪೊಲೀಸರಿಗೆ ಒದಗಿಸಿದ ಕಂಪೆನಿಯು ರೈತ ಸುಂದರ್ ಲಾಲ್ ಲೋಧಾ ವಿರುದ್ಧ ದೂರು ದಾಖಲಿದ್ದಾರೆ. ಸುಂದರ್‌ಲಾಲ್ ಲೋಧಾ ವಿರುದ್ಧ ಐಪಿಸಿಯ ಸೆಕ್ಷನ್ 290 ರ ಅಡಿಯಲ್ಲಿ ದಂಡ ವಿಧಿಸಲಾಗಿದೆ.
ಗೇಟ್‌ನ ಮುಂದೆಯೇ ಗೂಳಿ ಮೂತ್ರ ವಿಸರ್ಜಿಸುತ್ತಿರುವಾಗಲೂ ಭದ್ರತಾ ಸಿಬ್ಬಂದಿ ರೈತನಿಗೆ ತನ್ನ ಗಾಡಿಯನ್ನು ತೆಗೆಯುವಂತೆ ಹೇಳುತ್ತಾನೆ. ಆದರೆ ಎತ್ತು ಒಮ್ಮೆ ಮೂತ್ರ ವಿಸರ್ಜಿಸಲು ಪ್ರಾರಂಭಿಸಿದಾಗ ಯಾವುದೇ ಕಾರಣಕ್ಕೂ ಅದು ಚಲಿಸುವುದಿಲ್ಲ ಎನ್ನುತ್ತಾನೆ. ಆದರೆ ರೈತ ಉದ್ದೇಶಪೂರ್ವಕವಾಗಿ ಗೇಟಿನ ಮುಂದೆ ಗೂಳಿಯ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂದು ದೂರು ದಾಖಲಿಸಲಾಗಿದೆ.
ಈ ಬಗ್ಗೆ ಜಾಲತಾಣದಲ್ಲಿ ಸುದ್ದಿ ವೈರಲ್ ಆಗಿದ್ದು, ನೆಟ್ಟಿಗರು ಪೊಲೀಸರ ಕ್ರಮಕ್ಕೆ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.