ತೆಲಂಗಾಣ ವಿಧಾನಸಭಾ ಚುನಾವಣೆ ಹಿನ್ನೆಲೆ ನೀತಿ ಸಂಹಿತೆಯನ್ನು ಉಲ್ಲಂಘಿಸುವವರ ವಿರುದ್ಧ ಹದ್ದಿನ ಕಣ್ಣಿಟ್ಟಿರುವ ಪೊಲೀಸರ ಕಾರ್ಯಾಚರಣೆ ವೇಳೆ ಕಾರ್ ಡಿಕ್ಕಿಯಾಗಿ ಪೊಲೀಸ್ ಪೇದೆಯೊಬ್ಬರು ಗಾಯಗೊಂಡಿದ್ದಾರೆ. ಅಕ್ಟೋಬರ್ 18 ರ ಮಧ್ಯರಾತ್ರಿ ಚಿಲ್ಕಲಗುಡ ಪೊಲೀಸ್ ಠಾಣಾ ವ್ಯಾಪ್ತಿಯ ಸಿಕಂದರಾಬಾದ್‌ನಲ್ಲಿ ಘಟನೆ ನಡೆದಿದೆ. ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಕಾನ್ಸ್ ಟೇಬಲ್ ರಸ್ತೆಯ ಮಧ್ಯದಲ್ಲಿ ನಿಂತು ವೇಗವಾಗಿ ಬಂದ ಕಾರನ್ನು ನಿಲ್ಲಿಸಲು ಸೂಚಿಸಿದರು. ಆದರೆ ಚಾಲಕ ಅವರ ಆದೇಶವನ್ನು ನಿರ್ಲಕ್ಷಿಸಿ ಕಾರ್ ಡಿಕ್ಕಿ ಹೊಡೆಸಿ ವೇಗವಾಗಿ ವಾಹನ ಚಲಾಯಿಸಿದ್ದಾನೆ.
ಗಾಯಗೊಂಡಿದ್ದ ಕಾನ್ ಸ್ಟೇಬಲ್ ಮಹೇಶ್ ಅವರನ್ನು ಅಲ್ಲಿದ್ದ ಇತರ ಪೊಲೀಸ್ ಸಿಬ್ಬಂದಿ ಆಸ್ಪತ್ರೆಗೆ ಸಾಗಿಸಿದ್ದು ಅಪಾಯದಿಂದ ಪಾರಾಗಿದ್ದಾರೆ. ಘಟನೆಯ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದ್ದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ಕಾರನ್ನು ಪತ್ತೆ ಹಚ್ಚಲು ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಲು ರಾಜ್ಯದಲ್ಲಿ ಪೊಲೀಸರು ಮತ್ತು ಇತರ ಜಾರಿ ಸಂಸ್ಥೆಗಳು ತೀವ್ರ ತಪಾಸಣೆ ಕಾರ್ಯಾಚರಣೆ ನಡೆಸುತ್ತಿವೆ. ಮುಖ್ಯ ಚುನಾವಣಾಧಿಕಾರಿಗಳ ಪ್ರಕಾರ ಕಳೆದ 10 ದಿನಗಳ ತಪಾಸಣೆಯಲ್ಲಿ ಈಗಾಗಲೇ 264 ಕೋಟಿ ರೂಪಾಯಿ ಮೌಲ್ಯದ ನಗದು, ಚಿನ್ನ, ಮದ್ಯ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.