ಅಪರೂಪದ ಶಸ್ತ್ರಚಿಕಿತ್ಸೆಯೊಂದರಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯರು ತೆಲಂಗಾಣದಲ್ಲಿ ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ ಸುಮಾರು 8 ಕೆಜಿ ತೂಕದ ಗಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ವರ್ಷಗಟ್ಟಲೆ ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಹಿಳೆಯ ಜೀವವನ್ನು ವೈದ್ಯರು ಉಳಿಸಿದ್ದಾರೆ.
ಪೊನ್ನೆಬೋಯಿನ ಶ್ರೀನಿವಾಸ್ ಮತ್ತು ಅವರ ಪತ್ನಿ ಶಶಿರೇಖಾ ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯ ಚಿವ್ವೆಮ್ಲಾ ಮಂಡಲದ ಕುಡಕುಡ ಗ್ರಾಮದ ನಿವಾಸಿಗಳು. ಶಶಿರೇಖಾ ಅವರು ಬಹಳ ದಿನಗಳಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಆಕೆ ತನ್ನ ಪತಿ ಶ್ರೀನಿವಾಸ್ ಜೊತೆಗೆ ಸೂರ್ಯಪೇಟೆಯ ಹಲವು ಆಸ್ಪತ್ರೆಗಳಿಗೆ ಭೇಟಿ ನೀಡಿದರೂ ಪ್ರಯೋಜನವಾಗಿರಲಿಲ್ಲ.
ಕೊನೆಗೆ ಸೂರ್ಯಪೇಟೆಯ ಶ್ರೀ ಸ್ವಾತಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾರೆ. ಆಸ್ಪತ್ರೆಯ ವೈದ್ಯರು ಆಕೆಗೆ ಸ್ಕ್ಯಾನಿಂಗ್ ಮಾಡಿದಾಗ ಹೊಟ್ಟೆಯಲ್ಲಿ ಗಡ್ಡೆ ಇರುವುದು ಪತ್ತೆಯಾಯಿತು.
ಒದು ಗಂಟೆ ಕಾಲ ನಡೆದ ಶಶಿರೇಖಾ ಅವರ ಶಸ್ತ್ರಚಿಕಿತ್ಸೆಯಲ್ಲಿ ವೈದ್ಯರು, ಬಹಳ ಪ್ರಯತ್ನದಿಂದ ಆಕೆಯ ಹೊಟ್ಟೆಯಿಂದ 7 ರಿಂದ 8 ಕೆಜಿ ತೂಕದ ದೊಡ್ಡ ಗೆಡ್ಡೆಯನ್ನು ತೆಗೆದುಹಾಕಿದರು. ಶಶಿರೇಖಾ ಹೊಟ್ಟೆನೋವಿನಿಂದ ಮುಕ್ತಿ ಪಡೆದಿದ್ದಾರೆ.
ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ಸೂರ್ಯಪೇಟೆಯ ಖಾಸಗಿ ಆಸ್ಪತ್ರೆಯ ನಿರ್ವಹಣೆಗೆ ಶಶಿರೇಖಾ ಮತ್ತು ಅವರ ಕುಟುಂಬ ಸದಸ್ಯರು ಕೃತಜ್ಞತೆ ಸಲ್ಲಿಸಿದ್ದಾರೆ. ಬೇರೆಲ್ಲೂ ಮಾಡದ ಅಪರೂಪದ ಶಸ್ತ್ರಚಿಕಿತ್ಸೆ ಇದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.