ಕೋವಿಡ್ 19 ಸೋಂಕನ್ನು ತಡೆಗಟ್ಟುವ ಸಲುವಾಗಿ ತೆಲಂಗಾಣ ಸರ್ಕಾರ ರಾಜಧಾನಿ ಹೈದರಾಬಾದ್ನಲ್ಲಿ ಮಾಲ್, ಮಲ್ಟಿಪ್ಲೆಕ್ಸ್ ಹಾಗೂ ಪಬ್ಗಳಂತಹ ಸಾರ್ವಜನಿಕ ಪ್ರದೇಶಗಳಲ್ಲಿ ಕೇವಲ ಲಸಿಕೆ ಪಡೆದ ಜನರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡುವ ಬಗ್ಗೆ ಯೋಚನೆ ನಡೆಸುತ್ತಿದೆ.
ಈ ವಿಚಾರವಾಗಿ ಮಾತನಾಡಿದ ಸಾರ್ವಜನಿಕ ಆರೋಗ್ಯದ ರಾಜ್ಯ ನಿರ್ದೇಶಕ ಜಿ. ಶ್ರೀನಿವಾಸ್ ರಾವ್, ಈ ಹೊಸ ನಿಯಮವು ಹೈದರಾಬಾದ್ನಲ್ಲಿ ಮೊದಲ ಹಂತದ ರೂಪದಲ್ಲಿ ಜಾರಿಗೆ ಬರಲಿದೆ. ಇದಾದ ಬಳಿಕ ಈ ನಿಯಮವು ಜಿಲ್ಲೆಗಳಿಗೂ ವ್ಯಾಪಿಸಲಿದೆ. ಈ ಹೊಸ ನಿಯಾಮವಳಿಯ ರೂಪು ರೇಷೆಗಳ ಬಗ್ಗೆ ಆರೋಗ್ಯ ಇಲಾಖೆಯು ಈಗಾಗಲೇ ಸರ್ಕಾರಕ್ಕೆ ವಿವರಾತ್ಮಕ ಪ್ರಸ್ತಾವನೆಯನ್ನು ಸಲ್ಲಿಸಿದೆ. ಸರ್ಕಾರದಿಂದ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ರು.
ಈ ಪ್ರಸ್ತಾವನೆಯ ಪ್ರಕಾರ ಸಾರ್ವಜನಿಕ ಸ್ಥಳಗಳಿಗೆ ಎಂಟ್ರಿ ನೀಡಲು ಕನಿಷ್ಟ ಸಿಂಗಲ್ ಡೋಸ್ ಲಸಿಕೆಯನ್ನು ಪಡೆಯುವುದು ಅನಿವಾರ್ಯವಾಗಲಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಈ ನಿಯಮವು ಜಾರಿಗೆ ಬರುವ ನಿರೀಕ್ಷೆ ಇದೆ.
ಸಿನಿಮಾ ಮಂದಿರ, ರೆಸ್ಟಾರೆಂಟ್, ಪಾರ್ಕ್ ಸೇರಿದಂತೆ ಆರೋಗ್ಯ ಇಲಾಖೆಯ ಸಲಹೆಯ ಮೇರೆಗೆ ಸರ್ಕಾರವು ಇನ್ನೂ ಅನೇಕ ಸ್ಥಳಗಳಿಗೆ ಈ ನಿಯಮಾವಳಿಯನ್ನು ಕಡ್ಡಾಯ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಕೊರೊನಾ ಮೂರನೇ ಅಲೆಯು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ನಿಯಮವನ್ನು ಜಾರಿಗೆ ತರಲು ಮುಂದಾಗಿರೋದಾಗಿ ರಾವ್ ಹೇಳಿದ್ದಾರೆ.