ಹೈದರಾಬಾದ್: ಬಕ್ರೀದ್ ಹಬ್ಬಕ್ಕೆ ತೆಲಂಗಾಣ ಕಾಂಗ್ರೆಸ್ ಶಾಸಕ ಶುಭ ಹಾರೈಸಿದ್ದ ಪೋಸ್ಟರ್ ವಿವಾದಕ್ಕೆ ಕಾರಣವಾಗಿದೆ. ನಂತರ ಕಾಂಗ್ರೆಸ್ ಶಾಸಕ ಕ್ಷಮೆ ಯಾಚಿಸಿದ್ದಾರೆ. ಹಿಂದೂ ಭಾವನೆಗಳಿಗೆ ಶಾಸಕ ಧಕ್ಕೆ ತಂದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಬಕ್ರೀದ್ ಅಥವಾ ಈದ್ ಅಲ್-ಅಧಾ ಸಂದರ್ಭದಲ್ಲಿ ತೆಲಂಗಾಣ ಕಾಂಗ್ರೆಸ್ ಶಾಸಕ ಕುಂಭಂ ಅನಿಲ್ ಕುಮಾರ್ ರೆಡ್ಡಿ ಅವರು ಎಲ್ಲರಿಗೂ ಬಕ್ರೀದ್ ಹಬ್ಬದ ಶುಭಾಶಯ ಕೋರಿ ಹಸುವಿನ ಚಿತ್ರವಿರುವ ಪೋಸ್ಟರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ ವಿವಾದ ಭುಗಿಲೆದ್ದಿದೆ.
ಪೋಸ್ಟರ್ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಶಾಸಕರು ಕ್ಷಮೆಯಾಚಿಸಿದ್ದಾರೆ. ಪೋಸ್ಟರ್ ಹಸಿರು ಬಣ್ಣದಲ್ಲಿ ಹಸುವಿನ ದೇಹದ ಮೇಲೆ ಚಿತ್ರಿಸಿದ ಮಸೀದಿಯನ್ನು ತೋರಿಸುತ್ತದೆ. ಪೋಸ್ಟರ್‌ನ ಮೇಲ್ಭಾಗದಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮತ್ತು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಇತರ ರಾಜ್ಯ ಕಾಂಗ್ರೆಸ್ ನಾಯಕರ ಫೋಟೋಗಳಿವೆ. ಪೋಸ್ಟರ್‌ನಲ್ಲಿ ಕಾಂಗ್ರೆಸ್ ಶಾಸಕರು ಕೈಮುಗಿದ ಫೋಟೋ ಹಾಕಿದ್ದು, ತೀವ್ರ ಟೀಕೆ, ಆಕ್ರೋಶಕ್ಕೆ ಕಾರಣವಾಗಿದೆ.
ತೆಲಂಗಾಣದ ಕಾಂಗ್ರೆಸ್ ಶಾಸಕ ‘ಗೋಮಾತೆ’ ಚಿತ್ರಿಸುವ ಅತ್ಯಂತ ಆಕ್ಷೇಪಾರ್ಹವಾಗಿದೆ. ಗೋಹತ್ಯೆ ನಿಷೇಧಿಸಲಾಗಿದೆ ಎಂದು ತಿಳಿದಿದ್ದರೂ ಕಾಂಗ್ರೆಸ್ ಮತ್ತೊಮ್ಮೆ ಹಿಂದೂ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ಹೈದರಾಬಾದ್‌ನ ಗೋಶಾಮಹಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ದೂರಿದ್ದಾರೆ.
ಪೋಸ್ಟರ್ ಭಾರೀ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಕಾಂಗ್ರೆಸ್ ಶಾಸಕರು ಕ್ಷಮೆಯಾಚಿಸುವ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ.