ಹೈದರಾಬಾದ್: ಮಹಾನಗರಗಳ ಹೋಲಿಕೆಯಲ್ಲಿ ಹೈದರಾಬಾದ್ ವಾಸಿ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿದ್ದಾರೆ. ಇದೇ ವೇಳೆ ದೇಶದ ಮಹಾನಗರಗಳ ಬಗ್ಗೆ ಅವರು ವ್ಯಂಗ್ಯವಾಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕೊಲ್ಕತ್ತಾ ನಗರ ಕಸದ ಗುಂಡಿ, ದೆಹಲಿ ವಾಯುಮಾಲಿನ್ಯದ ನಗರ, ಬೆಂಗಳೂರು ನಗರ ವಾಹನ ದಟ್ಟಣೆಯ ಕೂಪ, ಚೆನ್ನೈ ಮತ್ತು ಮುಂಬೈ ಮಳೆ ನೀರಿನಲ್ಲಿ ಮುಳುಗುವ ನಗರಗಳು ಎಂದು ವ್ಯಂಗ್ಯವಾಡಿದ್ದಾರೆ.
ದೇಶದ ಮಹಾನಗರಗಳಿಗೆ ಹೋಲಿಸಿದರೆ ಹೂಡಿಕೆ ಮತ್ತು ಜನವಸತಿಗೆ ಹೈದರಾಬಾದ್ ಅತ್ಯುತ್ತಮ ನಗರವಾಗಿದೆ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.
ದೆಹಲಿ ವಾಯುಮಾಲಿನ್ಯದಿಂದ ನರಳುತ್ತಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೇ ದೆಹಲಿಗೆ ಹೋಗಲು ಹಿಂಜರಿಯುತ್ತಾರೆ. ಪರಿಸ್ಥಿತಿ ತೀರಾ ಬಿಗಡಾಯಿಸುವ ಮಟ್ಟಕ್ಕೆ ಹೋಗಿದೆ. ಐಟಿ ಸಿಟಿ ಎನ್ನುವ ಖ್ಯಾತಿಯ ಬೆಂಗಳೂರು ನಗರದಲ್ಲಿ ವಾಹನ ಸಂಚಾರ ದಟ್ಟಣೆಯಿಂದ ಪ್ರತಿ ದಿನವೂ ಟ್ರಾಫಿಕ್ ಜಾಮ್ ನಲ್ಲಿ ಜನ ನರಳುತ್ತಿದ್ದಾರೆ. ಒಂದು ಮಳೆ ಬಂದರೆ ಸಾಕು, ಚೆನ್ನೈಮ ಮುಂಬೈನ ಮಹಾನಗರಗಳು ಮುಳುಗಿ ಬೋಟ್ ಗಳಲ್ಲಿ ಓಡಾಡುವ ಪರಿಸ್ಥಿತಿ ಬರುತ್ತದೆ. ಇಂತಹ ಎಲ್ಲ ಮಹಾನಗರಗಳಿಗೆ ಹೋಲಿಸಿದರೆ ಹೈದರಾಬಾದ್ ವಾಸ ಯೋಗ್ಯ ಮತ್ತು ಹೂಡಿಕೆ ಯೋಗ್ಯ ನಗರವಾಗಿದೆ ಎಂದು ಹೇಳಿದ್ದಾರೆ.