ಹೈದರಾಬಾದ್: ತಮಿಳುನಾಡು ಮತ್ತು ಕರ್ನಾಟಕದ ನಂತರ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸುವುದಾಗಿ ತೆಲಂಗಾಣ ಘೋಷಿಸಿದೆ.
ಜುಲೈ 27 ರಂದು ನಡೆಯಲಿರುವ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಲು ತಮ್ಮ ಸರ್ಕಾರ ನಿರ್ಧರಿಸಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಕರ್ನಾಟಕ ಸಿಎಂ ಸಿದ್ದರಾಮಯ್ಯ, ತೆಲಂಗಾಣ ಸಿಎಂ ಎ. ರೇವಂತ್ ರೆಡ್ಡಿ ಬುಧವಾರ ಹೇಳಿದ್ದಾರೆ.
ಕೇಂದ್ರವು ತೆಲಂಗಾಣದ ಹಕ್ಕುಗಳಿಗೆ ಹಾನಿ ಮಾಡುತ್ತಿದೆ. ನೀಡಬೇಕಾದ ಹಣವನ್ನು ಬಿಡುಗಡೆ ಮಾಡುತ್ತಿಲ್ಲ. ಹೀಗಾಗಿ ಪ್ರತಿಭಟನಾರ್ಥವಾಗಿ ನೀತಿ ಆಯೋಗದ ಸಭೆ ಬಹಿಷ್ಕರಿಸುವುದಾಗಿ ರೇವಂತ್ ರೆಡ್ಡಿ ಶಾಸಕಾಂಗ ಸಭೆಯಲ್ಲಿ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಪ್ರಧಾನಿ ಅವರು ನೀತಿ ಆಯೋಗದ ಅಧ್ಯಕ್ಷರಾಗಿದ್ದಾರೆ. ಜುಲೈ 27 ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನೀತಿ ಆಯೋಗದ ಸಭೆ ನಡೆಯಲಿದೆ. ತೆಲಂಗಾಣದ ಹಿತಾಸಕ್ತಿ ಕಾಪಾಡದ ಕಾರಣ ತೆಲಂಗಾಣದ ಮುಖ್ಯಮಂತ್ರಿಯಾಗಿ ನಾನು ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ಬೇಡಿಕೆಗಳನ್ನು “ನಿರ್ಲಕ್ಷಿಸಿದ” ಕೇಂದ್ರ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ತಮ್ಮ ಸರ್ಕಾರ ನೀತಿ ಆಯೋಗದ ಸಭೆ ಬಹಿಷ್ಕರಿಸಲು ನಿರ್ಧರಿಸಿದೆ ಎಂದು ಸಿದ್ದರಾಮಯ್ಯ ಮಂಗಳವಾರ ಹೇಳಿದ್ದರು.
ಕೇಂದ್ರ ಬಜೆಟ್‌ನಲ್ಲಿ ತಮಿಳುನಾಡನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಮತ್ತು ಇದನ್ನು ಖಂಡಿಸಿ ಜುಲೈ 27 ರಂದು ದೆಹಲಿಯಲ್ಲಿ ನಡೆಯಲಿರುವ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸುವುದಾಗಿ ತಮಿಳುನಾಡು ಸಿಎಂ ಸ್ಟಾಲಿನ್ ಹೇಳಿದ್ದಾರೆ.