ಹೈದರಾಬಾದ್: ತೆಲಂಗಾಣದಲ್ಲಿ ವಾಮಾಚಾರ ಮಾಡಿದ ಶಂಕೆಯಲ್ಲಿ 75 ವರ್ಷದ ಅರ್ಚಕ, ಆತನ ಪುತ್ರನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೈದರಾಬಾದ್ ನ ಉಪ್ಪಲ್ ನಲ್ಲಿ ಹಿರಿಯ ನಾಗರಿಕ ಮತ್ತು ಅವರ ಮಗನನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿರುವುದಾಗಿ ತೆಲಂಗಾಣದ ರಾಚಕೊಂಡ ಪೊಲೀಸರು ಮಂಗಳವಾರ ಪ್ರಕಟಿಸಿದ್ದಾರೆ.
ಪ್ರಮುಖ ಆರೋಪಿಯ ತಾಯಿ ಸೇರಿದಂತೆ ಇನ್ನೂ ಮೂವರನ್ನು ಬಂಧಿಸಬೇಕಿದೆ. ಅರ್ಚಕ ನರಸಿಂಹ(75) ಮತ್ತು ಅವರ ಮಗ ಶ್ರೀನಿವಾಸ್(35) ಅವರನ್ನು ಅಕ್ಟೋಬರ್ 14 ರಂದು ಬೆಳಿಗ್ಗೆ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಕೊಂದಿದ್ದರು. ಪೊಲೀಸ್ ಕಮಿಷನರ್ ಮಹೇಶ್ ಎಂ. ಭಾಗವತ್ ಪ್ರಕಾರ, ವಾಮಾಚಾರವೇ ಕೊಲೆಯ ಉದ್ದೇಶವೆಂದು ಶಂಕಿಸಲಾಗಿದೆ.
ಪ್ರಮುಖ ಆರೋಪಿ ಲಿಕ್ಕಿ ವಿನಯ್ ಯೋಗೇಂದರ್ ರೆಡ್ಡಿ(31) ತನ್ನ ಮೇಲೆ ನರಸಿಂಹ ವಾಮಾಚಾರ ಮಾಡುತ್ತಿದ್ದಾನೆಂದು ಶಂಕಿಸಿ ಕೊಲೆ ಮಾಡಿದ್ದಾನೆ. ನರಸಿಂಹನಿಗೆ ಪರಿಚಿತನಾಗಿದ್ದ ವಿನಯ್ ಮೂಢನಂಬಿಕೆ ಹೊಂದಿದ್ದ. ಪೂಜೆ ಮಾಡಿದರೆ ತನಗೆ ಪೊಲೀಸ್ ಇನ್ಸ್ ಪೆಕ್ಟರ್ ಕೆಲಸ ಸಿಗುತ್ತದೆಂದು ತಿಳಿದು 2016 ರಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಪರೀಕ್ಷೆ ಪಾಸ್ ಮಾಡಿಸಲು ನರಸಿಂಹನಿಗೆ 6 ಲಕ್ಷ ರೂ., ಮತ್ತೊಬ್ಬರಿಗೆ 12.5 ಲಕ್ಷ ರೂ. ಕೊಟ್ಟಿದ್ದ.
ಆದರೆ, ಪರೀಕ್ಷೆಯಲ್ಲಿ ಪಾಸ್ ಆಗದ ಕಾರಣ ಕೆಲಸ ಸಿಕ್ಕಿರಲಿಲ್ಲ. ವ್ಯಕ್ತಿಗೆ ನೀಡಿದ್ದ 12.5 ಲಕ್ಷ ರೂ. ವಾಪಸ್ ಪಡೆದುಕೊಂಡಿದ್ದ ವಿನಯ್ ನರಸಿಂಹನಿಗೆ ನೀಡಿದ್ದ 6 ಲಕ್ಷ ರೂ. ಕೊಡಲು ಕೇಳಿದ್ದ. ಆದರೆ ಅವರು ಹಣ ಕೊಟ್ಟಿರಲಿಲ್ಲ. ಇತ್ತೀಚೆಗೆ ವಿನಯ್ ಗೆ ಅನಾರೋಗ್ಯ, ಸಂಕಷ್ಟ ಎದುರಾಗಿತ್ತು. ನರಸಿಂಹನೇ ತನಗೆ ವಾಮಾಚಾರ ಮಾಡಿಸಿದ್ದಾನೆ ಎಂದು ತಿಳಿದು ಸ್ನೇಹಿತರೊಂದಿಗೆ ಸೇರಿ ಹತ್ಯೆ ಮಾಡಿದ್ದಾನೆ.