ಬೆಂಗಳೂರು: ಹಣದ ಆಸೆಗಾಗಿ ಟೆಕ್ಕಿಗಳೇ ಇನ್ನೋರ್ವ ಟೆಕ್ಕಿಯನ್ನು ಕಿಡ್ನಾಪ್ ಮಾಡಿದ ಕಥೆಯಿದು. ಪಾರ್ಟನರ್ ಶಿಪ್ ನಲ್ಲಿ ಕಂಪನಿ ನಡೆಸಲು ಮುಂದಾಗಿದ್ದ ಟೆಕ್ಕಿ ವಿನೀತ್ ವರ್ಧನ್ ಎಂಬಾತನನ್ನು ಅಪಹರಿಸಿದ್ದ ಆತನ ಸ್ನೇಹಿತರು ಇದೀಗ ತಮಿಳುನಾಡಿನಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಟೆಕ್ಕಿ ವಿನೀತ್ ನನ್ನು ಪೊಲೀಸರು ರಕ್ಷಿಸಿದ್ದಾರೆ.
ಆಗಸ್ಟ್ 19ರಂದು ವಿನೀತ್ ವರ್ಧನ್ ಎಂಬ ಟೆಕ್ಕಿಯನ್ನು ಕೋರಮಂಗಲದಿಂದ ಆರೋಪಿಗಳು ಕಿಡ್ನಾಪ್ ಮಾಡಿದ್ದರು. ವಿನೀತ್ ಸ್ನೇಹಿತ ಹಾಗೂ ಪಾರ್ಟನರ್ ಆಗಿದ್ದ ಎಡ್ವಿನ್ ಪ್ರಶಾಂತ್ ಹಾಗೂ ಇನ್ನಿಬ್ಬರು ಅಂದು ವಿನೀತ್ ವರ್ಧನ್ ಮನೆ ಬಳಿ ಬಂದು ಪಾರ್ಟಿ ಮಾಡೋಣವೆಂದು ಆತನನ್ನು ಕರೆದೊಯ್ದಿದ್ದಾರೆ. ಈ ವೇಳೆ ಕಾರು ಎಲೆಕ್ಟ್ರಾನಿಕ್ ಸಿಟಿಯನ್ನು ದಾಟಿ ಮುಂದೆ ಹೋಗುತ್ತಿದ್ದಂತೆ ವಿನೀತ್ ಪ್ರಶ್ನಿಸಿದ್ದಾನೆ. ವಿನೀತ್ ಗೆ ಅನುಮಾನ ಬರುತ್ತಿದ್ದಂತೆ ಆತನ ಬಾಯಿ ಹಾಗೂ ಕಣ್ಣಿಗೆ ಬಟ್ಟೆ ಕಟ್ಟಿದ ಆರೋಪಿಗಳು ತಮಿಳುನಾಡಿಗೆ ಕರೆದೊಯ್ದು ಲಾಡ್ಜ್ ಒಂದರಲ್ಲಿ ರೂಂ ಬುಕ್ ಮಾಡಿ ಕೂಡಿಟ್ಟಿದ್ದಾರೆ.
ಎರಡು ದಿನವಾದರೂ ವಿನೀತ್ ಮನೆಗೆ ಬಾರದಿದ್ದಾಗ ಮನೆಯವರು ಕೋರಮಂಗಲ ಠಾಣೆಗೆ ದೂರು ನೀಡಿದ್ದಾರೆ. ಇದೇ ಸಂದರ್ಭದಲ್ಲಿ ವಿನೀತ್ ಕುಟುಂಬದವರಿಗೆ ಆರೋಪಿಗಳು ಕರೆ ಮಾಡಿ 2 ಕೋಟಿ ರೂಪಾಯಿ ಹಣ ನೀಡಿದರೆ ವಿನೀತ್ ನನ್ನು ಬಿಡುವುದಾಗಿ ಇಲ್ಲವಾದಲ್ಲಿ ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ.
ಪ್ರಕರಣದ ಜಾಡು ಹಿಡಿದ ಕೋರಮಂಗಲ ಪೊಲೀಸರು ತಮಿಳುನಾಡಿನಲ್ಲಿ ಕಾರ್ಯಾಚರಣೆ ನಡೆಸಿದ್ದು, ಇದೀಗ ಟೆಕ್ಕಿ ವಿನೀತ್ ವರ್ಧನ್ ನನ್ನು ರಕ್ಷಿಸಿದ್ದಾರೆ. ಅಲ್ಲದೇ ಅಪಹರಣಕಾರರಾದ ಎಡ್ವಿನ್ ಪ್ರಶಾಂತ್, ಸಂತೋಷ್ ಹಾಗೂ ಅರಿವೇಗಲನ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.