ಬೆಂಗಳೂರು: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಈ ನಡುವೆ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದ ಬಗ್ಗೆ ಹಿಂದಿನ ಕಾರಣವೇನು? ಎಂಬುದನ್ನು ಸ್ವತಃ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ನಿನ್ನೆ ಬೆಂಗಳೂರಿನ ಸದಾಶಿವ ನಗರ ನಿವಾಸಕ್ಕೆ ಆಗಮಿಸಿದ್ದ ಸಂಸದ ತೇಜಸ್ವಿ ಸೂರ್ಯ, ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಕೆಲ ಕಾಲ ಸಮಾಲೋಚನೆ ನಡೆಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ತೇಜಸ್ವಿ ಸೂರ್ಯ, ಅಭಿವೃದ್ಧಿ ಕಾರ್ಯ ವಿಚಾರವಾಗಿ ಡಿಸಿಎಂ ಭೇಟಿಯಾಗಿ ಚರ್ಚೆ ನಡೆಸಿದ್ದೇನೆ ಎಂದು ತಿಳಿಸಿದ್ದಾರೆ.
ಕೆ-ರೈಡ್ & ಬಿಎಂಆರ್ ಸಿಎಲ್ ಎಂಡಿ ಹುದ್ದೆಗಳು ಖಾಲಿಯಿದ್ದು ಈ ಕುರಿತು ಹಲವಾರು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದೆ. ಬೆಂಗಳೂರಿನ ಸಂಚಾರದಟ್ಟಣೆ ನಿಯಂತ್ರಣದ ಪ್ರಮುಖ ಕಾಮಗಾರಿಗೆ ಪೂರ್ಣಾವಧಿ ಎಂಡಿ ನೆಮಕ ಅಗತ್ಯವಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ.
ಬನಶಂಕರಿ ಮೆಟ್ರೋ ಸ್ಟೇಷನ್ ಹಾಗೂ ಬನಶಂಕರಿ ಬಿಎಂಟಿಸಿ ಬಸ್ ನಿಲ್ದಾಣಗಳ ನಡುವೆ ಸ್ಕೈವಾಕ್ ನಿರ್ಮಾಣ ಬಗ್ಗೆ ಈ ಹಿಂದೆಯೂ ಹೇಳಿದ್ದೆ. ಈ ಬಗ್ಗೆಯೂ ಶೀಘ್ರ ಅನುಷ್ಠಾನಗೊಳಿಸುವುದಾಗಿ ಡಿಸಿಎಂ ತಿಳಿಸಿದ್ದಾರೆ. ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾಗಿ ತಿಳಿಸಿದ್ದಾರೆ.