ಮಕ್ಕಳ ಕೈಗೆ ಮೊಬೈಲ್ ಸಿಕ್ಕರೆ ಮಾಡುವ ಅನಾಹುತ ಒಂದೆರಡಲ್ಲ. ಕೆಲ ಮಕ್ಕಳು ಆನ್ಲೈನ್ ನಲ್ಲಿ ಕೆಲ ವಸ್ತುಗಳನ್ನು ಆರ್ಡರ್ ಮಾಡಿ, ಪಾಲಕರ ಹಣ ಖಾಲಿ ಮಾಡಿದ್ದಾರೆ. ಆನ್ಲೈನ್ ಗೇಮ್ ನಲ್ಲಿಯೂ ಹಣ ಕಳೆದ ಮಕ್ಕಳಿದ್ದಾರೆ. ಇದಕ್ಕೆ ಈಗ ಮುಂಬೈ ಹುಡುಗ ಸಾಕ್ಷಿಯಾಗಿದ್ದಾನೆ. ಪಬ್ಜಿಗಾಗಿ ಒಂದಲ್ಲ ಎರಡಲ್ಲ, ಬರೋಬ್ಬರಿ 10 ಲಕ್ಷ ರೂಪಾಯಿ ಖಾಲಿ ಮಾಡಿದ್ದಾನೆ.
ಘಟನೆ ಮುಂಬೈನಲ್ಲಿ ನಡೆದಿದೆ. ಪಬ್ಜಿ ಹುಚ್ಚಿಗೆ ಬಿದ್ದಿದ್ದ ಹುಡುಗ, ಕಳೆದ ಒಂದು ತಿಂಗಳಿಂದ ನಿರಂತರವಾಗಿ ಆಟವಾಡ್ತಿದ್ದನಂತೆ. ತಾಯಿ ಖಾತೆಯಲ್ಲಿದ್ದ 10 ಲಕ್ಷ ರೂಪಾಯಿ ಇದಕ್ಕೆ ಖಾಲಿ ಮಾಡಿದ್ದಾನೆ. ಇದು ಗೊತ್ತಾಗ್ತಿದ್ದಂತೆ ಕೋಪಗೊಂಡ ಪಾಲಕರು ಏಟು ನೀಡಿದ್ದಾರೆ. ಇದ್ರಿಂದ ಕೋಪಗೊಂಡ ಹುಡುಗ ಮನೆ ಬಿಟ್ಟು ಹೋಗಿದ್ದಾನೆ.
ಹುಡುಗನ ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪಬ್ಜಿ ಇಷ್ಯಕ್ಕೆ ಮನೆಯಲ್ಲಿ ಗಲಾಟೆ ನಡೆದಿದ್ದು, ಮಗ ನಾಪತ್ತೆಯಾಗಿದ್ದಾನೆಂದು ಪಾಲಕರು ದೂರು ನೀಡಿದ್ದರು. ಅಪಹರಣ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಹುಡುಗನ ಪತ್ತೆ ಮಾಡಲು ಯಶಸ್ವಿಯಾಗಿದ್ದಾರೆ. ಅಂಧೇರಿ ಬಳಿ ಹುಡುಗ ಸಿಕ್ಕಿದ್ದಾನೆ. ಆತನಿಗೆ ಬುದ್ದಿ ಹೇಳಿ, ಹುಡುಗನನ್ನು ಪಾಲಕರಿಗೆ ಒಪ್ಪಿಸಿದ್ದಾರೆ.