ಸಂಚಾರ ನಿಯಮಗಳ ಪಾಲನೆಯ ಮಹತ್ವವನ್ನು ಪುನರುಚ್ಚರಿಸಿದ ಭಾರತೀಯ ಪೊಲೀಸ್ ಸೇವಾ ಅಧಿಕಾರಿ ದೀಪಾಂಶು ಕಾಬ್ರಾ ಅವರು ಬಾಲಕನೊಬ್ಬ ಹೆಲ್ಮೆಟ್ ಧರಿಸದೆ ರಸ್ತೆಯಲ್ಲಿ ದ್ವಿಚಕ್ರ ವಾಹನವನ್ನು ಚಲಾಯಿಸುವ ಮೂಲಕ ನಿಯಮಗಳನ್ನು ಉಲ್ಲಂಘಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ.
ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು 16 ವರ್ಷದ ಬಾಲಕನನ್ನು ನಿಲ್ಲಿಸಿ ವಿಚಾರಣೆ ನಡೆಸುತ್ತಿರುವ ವಿಡಿಯೋ ಇದಾಗಿದೆ. ನಿಮ್ಮ ಬಳಿ ಡ್ರೈವಿಂಗ್ ಲೈಸೆನ್ಸ್ ಇದೆಯೇ ಮತ್ತು ಇಯರ್ ಫೋನ್ ಹಾಕಿಕೊಂಡು ಏಕೆ ಓಡಿಸುತ್ತಿದ್ದೆ ಎಂದು ಕೇಳುತ್ತಾನೆ. 16 ವರ್ಷ ವಯಸ್ಸಿನವರಿಗೆ ವಾಹನ ಚಲಾಯಿಸಲು ಅನುಮತಿ ಇದೆ ಎಂದು ಬಾಲಕ ಉತ್ತರಿಸಿದ್ದಾನೆ.
ಅದಕ್ಕೆ ಟ್ರಾಫಿಕ್ ಪೊಲೀಸ್, 16 ವರ್ಷ ಮೇಲ್ಪಟ್ಟವರಿಗೆ ವೇಗದ ಮಿತಿಯಲ್ಲಿ ಎಲೆಕ್ಟ್ರಿಕ್ ವಾಹನ ಚಲಾಯಿಸಲು ಅವಕಾಶವಿದೆ ಎಂದು ಪೊಲೀಸರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಬಾಲಕನ ಭುಜವನ್ನು ತಟ್ಟಿ, ನಿನ್ನ ಪಾಲಕರನ್ನು ಇಲ್ಲಿ ಕರೆಸು, ಅಲ್ಲಿಯವರೆಗೆ ನಿನ್ನನ್ನು ಬಿಡುವುದಿಲ್ಲ ಎಂದು ಹುಡುಗನ ಸ್ಕೂಟರ್ ಅನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಕೆಲವು ಸಂದರ್ಭಗಳಲ್ಲಿ ಪಾಲಕರೇ ತಮ್ಮ ಮಕ್ಕಳಿಗೆ ಗಾಡಿ ಓಡಿಸಲು ಅನುಮತಿ ನೀಡಿದರೆ, ಹಲವು ಸಂದರ್ಭಗಳಲ್ಲಿ ಅಪ್ಪ-ಅಮ್ಮನ ಅರಿವಿಲ್ಲದೇ ಮಕ್ಕಳು ಗಾಡಿ ತೆಗೆದುಕೊಂಡು ಹೋಗುತ್ತಾರೆ. ಅಂಥವರಿಗೆ ಈ ವಿಡಿಯೋ ಪಾಠವಾಗುತ್ತಿದೆ ಎಂದು ಹಲವರು ಕಮೆಂಟ್ ಮೂಲಕ ತಿಳಿಸಿದ್ದಾರೆ.