ಹೆತ್ತವರೊಂದಿಗೆ ಜಗಳ ಹಾಗೂ ಭಿನ್ನತೆಗಳು ಮೂಡುವುದು ಸಹಜ. ಪ್ರತಿ ಕುಟುಂಬದಲ್ಲೂ ಈ ರೀತಿ ಆಗೇ ಆಗುತ್ತದೆ. ಆದರಲ್ಲೂ ಟೀನೇಜ್ ದಿನಗಳಲ್ಲಿ ಇಂಥ ಜಗಳಗಳು ಪ್ರತಿನಿತ್ಯ ನಡೆಯುತ್ತಲೇ ಇರುತ್ತವೆ.
ಬಹಳಷ್ಟು ಮಂದಿ ಈ ಜಗಳಗಳನ್ನು ಮರೆತು ಮತ್ತೆ ತಮ್ಮ ಹೆತ್ತವರೊಂದಿಗೆ ಸಹಜ ಸಂಬಂಧಕ್ಕೆ ಮರಳಿದರೆ ಸ್ಪೇನ್‌ನ 14 ವರ್ಷದ ಈ ಟೀನೇಜರ್ ಟ್ರ‍್ಯಾಕ್‌ಸೂಟ್ ಧರಿಸಿ ಮನೆಯಾಚೆ ಹೋಗುವಂತಿಲ್ಲ ಎಂದು ತನ್ನ ಹೆತ್ತವರು ತಾಕೀತು ಮಾಡಿದ ವಿಚಾರವಾಗಿ ಸಖತ್ತಾಗಿಯೇ ಮುನಿಸಿಕೊಂಡಿದ್ದಾನೆ.
2015ರಲ್ಲಿ ಹೀಗೆ ಹೆತ್ತವರೊಂದಿಗೆ ಜಗಳವಾಡಿಕೊಂಡ ಬಳಿಕ ಮುಂದಿನ ಆರು ವರ್ಷಗಳ ಕಾಲ ಉದ್ಯಾನವೊಂದರ ಹಿಂದೆ ಭೂಗತ ಗುಹೆಯೊಂದನ್ನು ತನಗಾಗಿ ನಿರ್ಮಿಸಲು ಆರಂಭಿಸಿದ ಆಂಡ್ರೆಸ್ ಕಾಂಟೋ. ಈ ಗುಹೆ ಈಗ ಪೂರ್ಣಗೊಂಡಿದ್ದು, ಒಳಗೆ ಒಂದು ಕೋಣೆ ಹಾಗೂ ಬಚ್ಚಲುಮನೆಗಳು ಇವೆ. ತನ್ನ ಆರು ವರ್ಷಗಳ ಪರಿಶ್ರಮದಿಂದ ಭಾರೀ ಖುಷಿಯಾಗಿದ್ದಾನೆ ಈಗ 20 ವರ್ಷದ ಕಾಂಟೋ.
“ಹಳ್ಳಿಗೆ ಹೋಗಲು ಬಟ್ಟೆ ಬದಲಿಸಲು ನನ್ನ ಹೆತ್ತವರು ತಿಳಿಸಿದ್ದರು. ಆದರೆ ನನಗೆ ಟ್ರಾಕ್ ಸೂಟ್ ಧರಿಸುವುದೇ ಇಷ್ಟವಾಗಿತ್ತು. ಈ ಬಟ್ಟೆಯಲ್ಲಿ ನಾನು ಹೋಗಬಾರದು ಎಂದು ಅವರು ತಿಳಿಸಿದರು. ಆಗ ನಾನು ನಮ್ಮ ಮನೆಯ ಹಿಂದಕ್ಕೆ ತೆರಳಿ ಅಗೆಯಲು ಆರಂಭಿಸಿದೆ” ಎಂದು ಕಾಂಟೋ ತಿಳಿಸಿದ್ದಾನೆ.
ಶಾಲೆಯ ಅವಧಿ ಮುಗಿದ ಬಳಿಕ ಇದ್ದ ಬಿಡುವಿನ ಅವಧಿಯಲ್ಲಿ ಹೀಗೆ ಗುಹೆ ತೋಡುತ್ತಾ ಸಾಗಿದ ಕಾಂಟೋ, ಇದೀಗ ತನಗೆಂದು ಸುಸಜ್ಜಿತವಾದ ಗೂಡೊಂದನ್ನೇ ಕಟ್ಟಿಕೊಂಡಿದ್ದಾನೆ.